ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಅವೈಜ್ಞಾನಿಕ ಕಾಮಗಾರಿ: ರೈತರ ಜಮೀನು ನಾಶ’

ಚತುಷ್ಪಥ ಗುತ್ತಿದಾರರ ವಿರುದ್ಧ ಶಾಸಕ ಆಕ್ರೋಶ: ಪ್ರತಿಭಟನೆಯ ಎಚ್ಚರಿಕೆ
Last Updated 19 ಜುಲೈ 2021, 3:49 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್‌ ಗ್ರಾಮದಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ತಡೆಗೋಡೆ ನಿರ್ಮಿಸದೆ ಸುರಿದಿರುವ ಭಾರಿ ಮಣ್ಣು ಗದ್ದೆ, ತೋಟಗಳಿಗೆ ಬಿದ್ದು ಹಾನಿ ಆಗಿರುವ ಸ್ಥಳಕ್ಕೆ ಭಾನುವಾರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ದಬ್ಬಾಳಿಕೆ ಅವರ ಅವೈಜ್ಞಾನಿಕ ಕಾಮಗಾರಿಯಲ್ಲಿ ಎದ್ದು ಕಾಣುತ್ತಿದೆ. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಗಮನಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ’ ಎಂದು ಹೇಳಿದರು.

‘ಹೆದ್ದಾರಿ ವಿಸ್ತರಣೆಗೆ ರೈತರ ಮೂರು ಎಕರೆ ಹಿಡುವಳಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆ ಸ್ಥಳಕ್ಕೆ ಸಾವಿರಾರು ಲಾರಿ ಲೋಡ್‌ನಷ್ಟು ಮಣ್ಣು ತಂದು ಸುರಿದಿದ್ದಾರೆ. ಮಳೆ ನೀರಿನೊಂದಿಗೆ ಭಾರಿ ಪ್ರಮಾಣದ ಮಣ್ಣು ಕೊಚ್ಚಿಹೋಗಿ ಕೆಳಭಾಗದ ಸುಮಾರು 25 ಎಕರೆ ಪ್ರದೇಶದ ಭತ್ತದ ಗದ್ದೆಯಲ್ಲಿ ನಿಂತಿದೆ. ಪಕ್ಕದ ಅಡಿಕೆ, ಕಾಫಿ ತೋಟಗಳಿಗೂ ಹಾನಿ ಉಂಟಾಗಿದೆ’ ಎಂದರು.

‘ಈ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು, ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಎನ್‌ಎಚ್‌ಎಐ ಎಂಜಿನಿಯರ್‌ಗಳನ್ನು ನೇರ ಹೊಣೆ ಮಾಡಬೇಕು. ಇನ್ನು ಮುಂದೆ ಭತ್ತ ಬೆಳೆಯುವುದಕ್ಕೆ ಸಾಧ್ಯವಾಗದ ಮಟಿಗೆ ಗದ್ದೆಯ ಮೇಲೆ ಮಣ್ಣು ಮುಚ್ಚಿಕೊಂಡಿರುವುದರಿಂದ ಈ ಜಾಗವನ್ನು ಹೆದ್ದಾರಿ ಪ್ರಾಧಿಕಾರ ಅಥವಾ ಗುತ್ತಿಗೆದಾರರೇ ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರದ ಹಣ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆ: ‘ಮಳೆ ನೀರಿನಲ್ಲಿ ಮಣ್ಣು ತಗ್ಗು ಪ್ರದೇಶಕ್ಕೆ ಕೊಚ್ಚಿ ಹೋಗುತ್ತದೆ ಎಂಬ ಸಾಮಾನ್ಯ ಜ್ಞಾನ ಬೇಡವೇ? ಬೇಜವಾಬ್ದಾರಿಯಿಂದ ಮಣ್ಣು ಸುರಿದು ರೈತರ ಬದುಕು ನಾಶ ಮಾಡುತ್ತಿರುವುದರ ವಿರುದ್ಧ ಶೀಘ್ರದಲ್ಲಿ ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕುಮಾರಸ್ವಾಮಿ ಹೇಳಿದರು.

ಆನೇಮಹಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರ, ಸದಸ್ಯ ಹಸೈನಾರ್ ಆನೇಮಹಲ್‌, ರೈತ ಚಂದನ್‌, ಕಿರಣ್‌ಚಂದನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT