ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ಅಳಿದುಳಿದ ಬೆಳೆ ಕಳೆದುಕೊಳ್ಳುವ ಆತಂಕ

ಜಿ. ಚಂದ್ರಶೇಖರ್
Published 5 ಜನವರಿ 2024, 6:50 IST
Last Updated 5 ಜನವರಿ 2024, 6:50 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನಲ್ಲಿ ಹವಾಮಾನದ ವೈಪರಿತ್ಯದಿಂದ ಬೀಳುತ್ತಿರುವ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಬೆಳೆ ಕಟಾವಿಗೆ ತೀವ್ರ ತೊಂದರೆಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ್ಗೆ ಬೀಳುತ್ತಿರುವ ತುಂತುರು ಮಳೆ ರೈತರನ್ನು ಕಂಗೆಡಿಸಿದೆ. ಭತ್ತ, ರಾಗಿ ಬೆಳೆಗಳ ಕಟಾವು ಚುರುಕಿನಿಂದ ನಡೆಯುತ್ತಿದೆ. ಮಲ್ಲಿಪಟ್ಟಣದ ಮಲೆನಾಡು ಪ್ರದೇಶದಲ್ಲಿ ಕಾಫಿ ಕಟಾವು ನಡೆಯುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಕಾಣದೇ ಬಣವೆ ಹಾಕಲು ಸಾಧ್ಯವಾಗುತ್ತಿಲ್ಲ.

ರಾಜಮುಡಿ ಹಾಗೂ ರಾಜಭೋಗ ಭತ್ತದ ಬೆಳೆಗೆ ಹೆಸರಾದ ತಾಲ್ಲೂಕಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ಎಡ ಮತ್ತು ಬಲದಂಡೆ ನಾಲಾ ಅಚ್ಚುಕಟ್ಟಿನಲ್ಲಿ ಬೆಳೆದ ಭತ್ತದ ಬೆಳೆ ಕಟಾವು ಕಾರ್ಯ ಬಿರುಸಿನಿಂದ ಸಾಗಿದೆ. ಕೆರೆ ಕಟ್ಟೆ ಅಚ್ಚುಕಟ್ಟಿನಲ್ಲಿ ಬೆಳೆದಿದ್ದ ಭತ್ತದ ಕಟಾವು ಕಾರ್ಯ ಬಹುತೇಕ ಮುಕ್ತಾಯವಾಗಿದೆ. ಇದೀಗ ನೀರಾವರಿ ಹಂತದ ಕಟ್ಟೇಪುರ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಕಟಾವು ಕಾರ್ಯವನ್ನು ರೈತರು ನಡೆಸುತ್ತಿದ್ದಾರೆ.

‘ಹವಾಮಾನ ವೈಪರೀತ್ಯದ ಪರಿಣಾಮ ಸಾಕಷ್ಟು ಭಾಗದಲ್ಲಿ ಬೆಳೆದಿದ್ದ ಭತ್ತದ ಬೆಳೆ, ಗಾಳಿ ಹೊಡೆತಕ್ಕೆ ಸಿಲುಕಿ ನೆಲಕ್ಕೆ ಬಾಗಿದೆ. ಉದ್ದವಾಗಿ ಬೆಳವಣಿಗೆ ಕಾಣುವ ರಾಜಮುಡಿ ರಾಜಭೋಗ ಭತ್ತದ ಬೆಳೆ ಭೂಮಿಗೆ ಹಾಸಿಕೊಂಡಿರುವ ಕಾರಣ, ಕೆಲವೆಡೆ ಹುಲ್ಲು ಕರಗಿ ಬೆಳೆ ಹಾನಿಗೀಡಾಗಿದೆ. ಹೀಗಾಗಿ ಹುಲ್ಲು ಮತ್ತು ಭತ್ತದ ಫಸಲು ಇಳುವರಿ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ’ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಹಾರಂಗಿ ಮತ್ತು ಹೇಮಾವತಿ ನಾಲೆಗೆ ನೀರು ಹರಿಸದ ಕಾರಣ ಕೂಲಿ ಹಣ ಇಳಿಕೆಯಾಗಬಹುದು ಎನ್ನುವ ರೈತರ ನಿರೀಕ್ಷೆ ಕೂಡ ಹುಸಿಯಾಗಿದ್ದು, ಭತ್ತದ ಬೆಳೆ ಕಟಾವು ಕೂಲಿ ಕೂಡ ದುಪ್ಪಟ್ಟಾಗಿದೆ. ಬಹುತೇಕ ರೈತರು ಪರಸ್ಪರ ಮುಯ್ಯಾಳು ಮಾಡಿಕೊಂಡು ಕಟಾವು ಕಾರ್ಯ ಕೈಗೊಂಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಭತ್ತದ ಬೆಳೆ ಬೆಳೆಯಲು ಅಧಿಕ ಖರ್ಚು ಆಗುತ್ತಿದ್ದರಿಂದ ಸಾಕಷ್ಟು ರೈತರು ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದರು. ಈ ಬಾರಿ ಸಾಕಷ್ಟು ಮಳೆಯಾಗದೆ ಬರದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಭತ್ತದ ಬೆಳೆ ಪ್ರದೇಶ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬರ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಬೆಳೆದ ಬೆಳೆ ಕಟಾವಿನ ಹಂತದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಕೈಗೆ ಬರದಂತಾಗಿದೆ.

ಈ ಬಾರಿ ಭತ್ತದ ಬೆಲೆ ಕೂಡ ಗಗನಮುಖಿಯಾಗಿದ್ದು, ರಾಜಮುಡಿ ಭತ್ತದ ಬೆಲೆ ಒಂದು ಕ್ವಿಂಟಲಾಗೆ ₹4,200ಕ್ಕೆ ಏರಿದೆ. ಅಕ್ಕಿ ಕ್ವಿಂಟಾಲ್‌ಗೆ ₹ 8,400 ತನಕ ಮಾರಾಟವಾಗುತ್ತಿದೆ.

ಅರಕಲಗೂಡು ತಾಲ್ಲೂಕಿನ ನಾಲಾ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಕಟಾವು ಕಾರ್ಯ ನಡೆಸುತ್ತಿರುವ ರೈತರು
ಅರಕಲಗೂಡು ತಾಲ್ಲೂಕಿನ ನಾಲಾ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಕಟಾವು ಕಾರ್ಯ ನಡೆಸುತ್ತಿರುವ ರೈತರು
ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್‌ನಲ್ಲಿ ಗುರಿ ಇದ್ದು 8500 ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಮಾಡಲಾಗಿದೆ. ಕಟಾವು ನಡೆಯುತ್ತಿರುವಾಗಲೇ ಅಕಾಲಿಕ ಮಳೆ ಬೀಳುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ.
ಕೆ.ಜಿ.ಕವಿತಾ ಸಹಾಯಕ ಕೃಷಿ ನಿರ್ದೇಶಕಿ
ಅಕಾಲಿಕ ಮಳೆ ಕಾಫಿ ಬೆಳೆಗಾರರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ಬರಗಾಲದ ಬವಣೆಯಲ್ಲಿ ಕಷ್ಟಪಟ್ಟು ಉಳಿಸಿಕೊಂಡಿದ್ದ ಬೆಳೆ ಕೈಗೆ ಬರದ ಪರಿಸ್ಥಿತಿ ಎದುರಾಗಿದೆ.
ನಟೇಶ್ ಕುಮಾರ್ ಕಾಫಿ ಬೆಳೆಗಾರ
ಕಾಫಿ ಕಟಾವಿಗೂ ತೊಂದರೆ
‘ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ಕಟಾವಿಗೆ ಮಳೆ ಅಡ್ಡಿಯಾಗಿದೆ. ಅರೇಬಿಕಾ ಕಾಫಿ ಶೇ75ರಷ್ಟು ಮುಗಿದಿದೆ. ರೋಬಸ್ಟಾ ಕಾಫಿ ಹಣ್ಣಾಗಿದ್ದು ಕಟಾವು ಪ್ರಾರಂಭವಾಗಬೇಕಿತ್ತು. ಅಕಾಲಿಕ ಮಳೆ ಕಾಫಿ ಮೇಲೆ ತೀವ್ರ ಪರಿಣಾಮ ಬೀರಲಿದೆ’ ಎನ್ನುತ್ತಾರೆ ಬೆಳೆಗಾರ ನಟೇಶ್ ಕುಮಾರ್. ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಶೇ50ರಷ್ಟು ಮಾತ್ರ ಬೆಳೆ ಬಂದಿದ್ದು ಗಿಡದಲ್ಲಿ ಕಾಫಿ ಹಣ್ಣು ಇರುವಾಗಲೇ ಮಳೆ ಬೀಳುತ್ತಿರುವುದರಿಂದ ಅವಧಿಗೂ ಮುನ್ನ ಹೊಸ ಹೂವು ಅರಳಿ ಮುಂದಿನ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹಣ್ಣುಗಳು ಉದುರಿ ಬಿದ್ದು ನಷ್ಟವಾಗಲಿದೆ ಕಟಾವು ನಡೆಸಿರುವ ಕಾಫಿಯನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು. ಜಿಲ್ಲೆಯಲ್ಲೆ ಅತೀ ಹೆಚ್ಚಿನ ಅಡಿಕೆ ಬೆಳೆ ಬೆಳೆಯುವ ತಾಲ್ಲೂಕಿನಲ್ಲಿ ಕಟಾವಾಗಿರುವ ಅಡಿಕೆಯ ಸಂಸ್ಕರಣೆ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಪ್ರಾರಂಭದಲ್ಲಿ ಮಳೆ ಬರದೇ ಹಾನಿಯಾದರೆ ಈಗ ಮಳೆ ಬಂದು ಅಳಿದುಳಿದ್ದನ್ನು ಕೊಚ್ಚಿಕೊಂಡು ಹೋಗುತ್ತಿದೆ ಎಂದು ಅನ್ನದಾತರು ನೋವು ತೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT