ಹಾಸನ: ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ

ಹಾಸನ: ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಗುರುವಾರ ವೈಕುಂಠ ಏಕಾದಶಿಯನ್ನು ಭಕ್ತರು ಸಂಭ್ರಮದಿಂದ ಆಚರಿಸಿದರು.
ವೆಂಕಟೇಶ್ವರ ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆಗಳು ನಡೆದವು. ದೇವರ ದರ್ಶನಕ್ಕಾಗಿ ಭಕ್ತರು ಬೆಳಿಗ್ಗೆಯೇ ಸಾಲುಗಟ್ಟಿ ನಿಂತಿದ್ದರು.
ಹಾಸನದ ಮಹಾರಾಜ ಪಾರ್ಕ್ ರಸ್ತೆಯಲ್ಲಿರುವ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಇಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಮೂಲಕ ಭಕ್ತರು ಸಾಗಿ ದೇವರ ದರ್ಶನ ಪಡೆದರು.
ಸೀತಾ, ರಾಮ, ಆಂಜನೇಯ, ಪ್ರಸನ್ನ ರಾಮೇಶ್ವರ ಮೂರ್ತಿಗೂ ಪುಷ್ಪಾಂಲಕಾರ ಮಾಡಲಾಗಿತ್ತು.
ನಗರದಲ್ಲಿ ಹಳೇ ಅಂಚೆ ಕಚೇರಿ ಸಮೀಪದ ಪಾಂಡುರಂಗ ದೇವಸ್ಥಾನ, ದೊಡ್ಡಗರಡಿ ಬೀದಿಯಲ್ಲಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿ, ಪಾಯಣ್ಣ ಧರ್ಮಛತ್ರ ಬಳಿಯ ಚನ್ನಕೇಶವ ಸ್ವಾಮಿ, ಸಾಯಿ ಬಾಬಾ, ಶಂಕರ ಮಠ, ಚಾಮುಂಡೇಶ್ವರಿ ದೇವಾಲಯಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಸರ್ಕಾರದ ಮಾರ್ಗಸೂಚಿಯಂತೆ ದೇವಾಲಯ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇಡಲಾಗಿತ್ತು. ಭಕ್ತರು ಮಾಸ್ಕ್ ಧರಿಸುವುದು ಮತ್ತು ಎರಡು ಬಾರಿ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡಲಾಗಿತ್ತು. ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ಭಕ್ತರ ಸಂಖ್ಯೆಯಲ್ಲೂ ಇಳಿಮುಖ ಕಂಡುಬಂತು. ಸಂಜೆ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಸೀತಾ ರಾಮಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ‘ಸೂರ್ಯ ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಒಂದು ದಿನ ಉಪವಾಸವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸವಿದ್ದಂತೆ. ಇಂದು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ’ ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.