ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಿಎಂ ರಾಜೀನಾಮೆಗೆ ಒತ್ತಾಯ

Published 28 ಜೂನ್ 2024, 15:14 IST
Last Updated 28 ಜೂನ್ 2024, 15:14 IST
ಅಕ್ಷರ ಗಾತ್ರ

ಹಾಸನ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 187 ಕೋಟಿ ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಎದುರು ಸೇರಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಎನ್‌.ಆರ್. ಸರ್ಕಲ್ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ, ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಪ್ರಕರಣದಲ್ಲಿ ಗಂಭೀರ ಆರೋಪ ಹೊತ್ತಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನಿಗಮದಲ್ಲಿ ಸುಮಾರು ₹ 187 ಕೋಟಿ ಭ್ರಷ್ಟಾಚಾರ ನಡೆದಿದೆ. ‌ಈ ಸಂಬಂಧ ಬಿಜೆಪಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಸರ್ಕಾರ ಮತ್ತು ಹಣಕಾಸು ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದಲೂ ಹೋರಾಟ ಮಾಡಲಾಗುತ್ತಿದೆ ಎಂದರು.

ವಾಲ್ಮೀಕಿ ನಿಗಮಕ್ಕೆ ಸೇರಿದ ₹ 187 ಕೋಟಿ ದುರ್ಬಳಕೆ ಮಾಡಿಕೊಂಡಿದ್ದು, ₹ 89 ಕೋಟಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. 700ಕ್ಕೂ ಅಧಿಕ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ತೆಲಂಗಾಣ, ಹೈದರಾಬಾದ್‌ಗಳಲ್ಲಿ ಖಾತೆ ತೆರೆಯಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ ಎಂದರು.

ಕೂಲಿ ಕಾರ್ಮಿಕರು, ದನ, ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳ ಖಾತೆಗೆ ₹ 2 ಲಕ್ಷದಿಂದ ₹ 5 ಲಕ್ಷದವರೆಗೆ ಹಣ ಖಾತೆಗೆ ಜಮಾ ಮಾಡಿ, ಅದೇ ಖಾತೆಯಿಂದ ವಾಪಸ್ ಪಡೆಯಲಾಗಿದೆ. ಇದೇ ಹಣವನ್ನು ಲೋಕಸಭೆ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡಿರುವ ಮಾಹಿತಿಯು ಲಭ್ಯವಾಗಿದ್ದು, ರಾಜ್ಯ ಸರ್ಕಾರ ಯಾವ ಮಟ್ಟದ ದುರಾಡಳಿತ ನಡೆಸಿದೆ ಎಂಬುದು ಸ್ಪಷ್ಟವಾಗಿದೆ ಆರೋಪಿಸಿದರು.

ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಾಗೂ ಬ್ಯಾಂಕ್‌ನಲ್ಲಿ ಖಾತೆ ತೆರೆದಾಗ ಆರ್ಥಿಕ ಇಲಾಖೆ ಗಮನಕ್ಕೆ ಏಕೆ ಬರಲಿಲ್ಲ? ಸ್ವಂತ ಹಣಕಾಸು ಇಲಾಖೆ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಹೊಣೆಗಾರರಲ್ಲವೇ? ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು, ಕೂಡಲೇ ಇವರು ರಾಜೀನಾಮೆ ನೀಡಬೇಕು. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ಮುಖಂಡರಾದ ನಾರಾಯಣಗೌಡ, ವೇದಾವತಿ, ರತ್ನಪ್ರಕಾಶ್, ವಿಜಯಲಕ್ಷ್ಮಿ, ಅನ್ನಪೂರ್ಣ, ನೇತ್ರಾವತಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಹಾಲಿನ ದರ ಏರಿಕೆಗೆ ಆಕ್ರೋಶ
ಇತ್ತೀಚೆಗೆ ನಂದಿನಿ ಹಾಲಿನ ದರವನ್ನು ಹೆಚ್ಚಿಸಿ ಸರ್ಕಾರ ಬಡವರಿಗೆ ಆರ್ಥಿಕ ಹೊರೆ ಹೆಚ್ಚಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಈಗಾಗಲೇ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸರ್ಕಾರ ಆರ್ಥಿಕ ಹೊರೆಯನ್ನು ಹೊರಿಸಿದೆ. ಈ ನಡುವೆ ನಿತ್ಯ ಮನೆ ಬಳಕೆಯ ಹಾಲಿನ ದರವನ್ನು ಏರಿಕೆ ಮಾಡಿ ಮತ್ತಷ್ಟು ಹೊರೆಯನ್ನಾಗಿ ಮಾಡಿದ್ದು ಕೂಡಲೇ ದತ ಏರಿಕೆ  ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT