ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಗಚಿ ಜಲಾಶಯ ಮಲಿನ

ಕೊಳಚೆ ನೀರು ನದಿ ಸೇರದಂತೆ ಕ್ರಮ, ವಿಸ್ತೃತ ವರದಿಗೆ ಡಿ.ಸಿ ಸೂಚನೆ
Last Updated 2 ಜುಲೈ 2019, 13:59 IST
ಅಕ್ಷರ ಗಾತ್ರ

ಹಾಸನ: ನದಿಗಳಿಗೆ ಕಲುಷಿತ ನೀರು ಸೇರ್ಪಡೆಯಿಂದ ಯಗಚಿ ಜಲಾಶಯ ಮಲಿನಗೊಂಡಿದ್ದು, ಅದನ್ನು ಸರಿಪಡಿಸಲು ಶೀಘ್ರ ವಿಸ್ತೃತ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಷಾಷಾ ಅವರು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ನಗರ ನೀರು ಸರಬರಾಜು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಗೆ ಸೂಚನೆ ನೀಡಿದರು.

‌ ಪರಿಸರ ಸಂರಕ್ಷಣಾ ಟಾಸ್ಕ್ ಫೋರ್ಸ್‌ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಯಗಚಿ ನದಿಗೆ ವಿವಿಧ ಮೂಲಗಳಿಂದ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಹಾಸನ ಮತ್ತು ಬೇಲೂರು ನಗರ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕು ಎಂದು ತಿಳಿಸಿದರು.

ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಯಗಚಿ ನದಿಗೆ ಕೊಳಚೆ ನೀರು ಸೇರ್ಪಡೆಗೊಳ್ಳುತ್ತಿರುವ ಎಲ್ಲಾ ಪ್ರದೇಶಗಳು ಮತ್ತು ಅದರ ಮೂಲಗಳನ್ನು ಪತ್ತೆ ಮಾಡಿ ಅವುಗಳನ್ನು ಶುದ್ಧೀಕರಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಹಾಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಮುಂದಿನ 15-20 ವರ್ಷಗಳ ಜನಸಂಖ್ಯೆ ಬೆಳೆವಣಿಗೆಯನ್ನ ಗುರುತಿಸಿ ಮೇಲ್ದರ್ಜೇಗೇರಿಸಲು ಕ್ರಮ ವಹಿಸಿ ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ನಗರಸಭಾ ಆಯುಕ್ತ ಪರಮೇಶ್, ನಗರಕ್ಕೆ ಹೊಂದಿಕೊಂಡಿರುವ ವಿದ್ಯಾನಗರ, ವಿಜಯನಗರ ಹಾಗೂ ನಗರದ ಕೆಲವು ಪ್ರದೇಶಗಳಿಂದ ಕೊಳಚೆ ನೀರು ಹುಣಸಿನಕೆರೆ ಹಾಗೂ ಇತರ ಕೆರೆಗಳನ್ನು ಸೇರಿದಂತೆ ಅಲ್ಲಿಂದ ಕೋಡಿ ಬಿದ್ದು ನೀರು ಯಗಚಿ ನದಿ ಸೇರುತ್ತಿದೆ. ಈ ಎಲ್ಲಾ ,ಪ್ರದೇಶಗಳನ್ನು ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗಬೇಕಿದೆ ಅದಕ್ಕೆ ಪೂರಕವಾಗಿ ಶುದ್ಧೀಕರಣ ಘಟಕಗಳು ಸ್ಥಾಪನೆಯಾಗಬೇಕು ಎಂದು ಸಲಹೆ ನೀಡಿದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಮಾತನಾಡಿ, ಬೇಲೂರು ಪಟ್ಟಣದ ಭೌಗೊಳಿಕ ಪರಿಸ್ಥಿತಿಗೆ ಅನುಗುಣವಾಗಿ ನಾಲ್ಕು ಕಲುಷಿತ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದ್ದು, ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಹಾಸನದ ವಿದ್ಯಾನಗರ, ವಿಜಯ ನಗರ ಹಾಗೂ ಕೆಲವು ಕೊಳಚೆ ಪ್ರದೇಶಗಳಲ್ಲಿ ಮನೆಯ ಶೌಚ ನೀರಿನ ಪೈಪುಗಳನ್ನು ಒಳ ಚರಂಡಿಗೆ ಸಂರ್ಪಕಿಸಬೇಕಿದೆ. ಹಲವು ಕಡೆಗಳಲ್ಲಿ ಪೈಪ್ ಲೈನ್‍ಗಳು ವ್ಯತ್ಯಾಸಗೊಂಡು ಕಲುಷಿತ ನೀರು ಸೇರುತ್ತಿದ್ದು, ಅದನ್ನು ಸರಿಪಡಿಸಬೇಕಿದೆ ಎಂದು ಪರಮೇಶ್ ತಿಳಿಸಿದರು.

ಹಾಲಿ ಹಾಸನ ನಗರದ ಕೊಳಚೆ ನೀರು ಶುದ್ಧೀಕರಣಕ್ಕೆ ಕೇವಲ 10 ಎಂ.ಎಲ್‌.ಡಿ. ಸಾಮರ್ಥ್ಯದ ಘಟಕ ಇದೆ. ಅಮೃತ್‌ ಯೋಜನೆ ಕೂಡ ಅನುಷ್ಠಾನವಾಗುತ್ತಿರುವುದು ಹಾಗೂ ನಗರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು 40 ಎಂ.ಎಲ್.ಡಿ ಸಾಮರ್ಥ್ಯದ ಘಟಕ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT