ಹಾಸನ: ಪ್ರೀತಿಸಲು ನಿರಾಕರಿಸಿದ ಯುವತಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಾಲ್ಲೂಕಿನ ಅಗಿಲೆ ಬಳಿಯ ಕುಂತಿಬೆಟ್ಟದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಆಲೂರು ತಾಲ್ಲೂಕು ಕವಳಗೆರೆ ಗ್ರಾಮದ ಸುಚಿತ್ರಾ (21) ಕೊಲೆಯಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಸುಚಿತ್ರಾಳ ಸಹಪಾಠಿ ತೇಜಸ್ ಈ ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.
ಸುಚಿತ್ರಾ, ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ತೇಜಸ್ ಸಹ ವ್ಯಾಸಂಗ ಮಾಡುತ್ತಿದ್ದ. ಇಬ್ಬರ ನಡುವಿನ ಸ್ನೇಹ, ಪ್ರೇಮಕ್ಕೆ ತಿರುಗಿತ್ತು. ಆದರೆ ನಂತರದಲ್ಲಿ ತೇಜಸ್‍ನನ್ನು ಪ್ರೀತಿಸಲು ಸುಚಿತ್ರಾ ನಿರಾಕರಿಸಿದ್ದಳು.
ಗುರುವಾರ ಬೆಳಿಗ್ಗೆ ಸುಚಿತ್ರಾಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದ ತೇಜಸ್, ನಿರ್ಜನ ಕುಂತಿಬೆಟ್ಟದಲ್ಲಿ ಪ್ರದೇಶದಲ್ಲಿ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡಿದ್ದಾನೆ. ಈ ಮನವಿಗೆ ಸುಚಿತ್ರಾ ಒಪ್ಪದೇ ಇದ್ದಾಗ, ಬೆಟ್ಟಗುಡ್ಡಗಳ ಮಧ್ಯೆ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ನಂತರ ಘಟನಾ ಸ್ಥಳದಿಂದ ಪರಾರಿಯಾಗಿದ್ದ.
ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.