ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಊರಿಗೆ ನೀರು ಮರೀಚಿಕೆ

Last Updated 14 ಸೆಪ್ಟೆಂಬರ್ 2011, 7:30 IST
ಅಕ್ಷರ ಗಾತ್ರ

ಬೇಲೂರು: ಹೊಯ್ಸಳರ ಕಾಲದಲ್ಲಿಯೇ ಅಸ್ತಿತ್ವದಲ್ಲಿದ್ದು, ಬೇಲೂರು ಪಟ್ಟಣಕ್ಕೆ ಹೊಂದಿಕೊಂಡಂತಿರುವ `ಬಂಟೇನಹಳ್ಳಿ~ ಗ್ರಾಮ ಇತಿಹಾಸ ಪ್ರಸಿದ್ಧವಾಗಿದ್ದರೂ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದೆ. ಜನ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ.

ಹೊಯ್ಸಳ ಅರಸರ ಕಾಲದಲ್ಲಿ ಬಂಟೇನಹಳ್ಳಿ ಬೇಲೂರು ಪಟ್ಟಣಕ್ಕೆ ಉಪ ಗ್ರಾಮವಾಗಿತ್ತು. 1387ರಲ್ಲಿ ಬೈರಣ್ಣ ಎಂಬಾತ ಈ ಊರಿನಲ್ಲಿ ಕುಡಿಯುವ ನೀರಿನ ಕಟ್ಟೆ ಕಟ್ಟಿಸಿದ್ದ. ಮೈಸೂರು ಅರಸ ಚಿಕ್ಕದೇವರಾಯರು ಊರ ಬಾಗಿಲನ್ನು ನಿರ್ಮಿಸಿ ಕೊಟ್ಟಿದ್ದರು. ವಿಜಯನಗರ ಅರಸರ ಕಾಲದಲ್ಲಿ ಈ ಗ್ರಾಮದಲ್ಲಿ ಬನ್ನಿ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಬನ್ನಿ ಮಂಟಪದಲ್ಲಿ ಪ್ರತಿ ವಿಜಯದಶಮಿ ಹಬ್ಬದ ದಿನ ಚೆನ್ನಕೇಶವ ಸ್ವಾಮಿಯ ಉತ್ಸವ ನಡೆದು ಇಲ್ಲಿ ಬನ್ನಿ ಮುಡಿಯುವ ಸಂಪ್ರದಾಯ ಈಗಲೂ ನಡೆದು ಕೊಂಡು ಬಂದಿದೆ.

ಬಂಟೇನಹಳ್ಳಿ ಗ್ರಾಮದಲ್ಲಿ 680 ಮನೆಗಳಿದ್ದು, 1600ರಷ್ಟು ಜನಸಂಖ್ಯೆ ಇದೆ. ಮುಸ್ಲಿಂ ಜನಾಂಗದವರು ಈ ಗ್ರಾಮದಲ್ಲಿ ಹೆಚ್ಚಾಗಿದ್ದಾರೆ. ಮೂಲ ನಿವಾಸಿಗಳಿಗಿಂತ ವಲಸೆ ಬಂದಿರುವ ಕಲ್ಲು ಒಡೆಯುವ ತಮಿಳರ ಸಂಖ್ಯೆಯೂ ಇಲ್ಲಿ ಸಾಕಷ್ಟಿದೆ. 10 ವರ್ಷದ ಹಿಂದೆ ವಿಶ್ವ ಬ್ಯಾಂಕ್ ಯೋಜನೆಯಡಿ ಬಂಟೇನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ.

50 ಸಾವಿರ ಗ್ಯಾಲನ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಇಲ್ಲಿದೆ. ಆದರೂ ಈ ಊರಿನ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ವಿಶ್ವಬ್ಯಾಂಕ್ ಯೋಜನೆ ಸಂಪೂರ್ಣ ಸಫಲವಾಗದಿರುವುದು, ಪದೇ ಪದೇ ಕೈ ಕೊಡುವ ವಿದ್ಯುತ್‌ನಿಂದಾಗಿ ಕುಡಿಯುವ ನೀರನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ವಾರಕ್ಕೆ ಎರಡು ದಿನವೂ ಈ ಗ್ರಾಮದ ಜನರಿಗೆ ನೀರು ಸಿಗುತ್ತಿಲ್ಲ. ಇರುವ ಕೊಳವೆ ಬಾವಿಗಳ ಪೈಕಿ 3 ಕೊಳವೆ ಬಾವಿಗಳು ಹಾಳಾಗಿರುವುದು ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಕಳೆದ 20 ವರ್ಷಗಳಿಂದ ಈ ಗ್ರಾಮದಲ್ಲಿನ 20ಕ್ಕೂ ಹೆಚ್ಚು ಬೀದಿಗಳಿಗೆ ಡಾಂಬರನ್ನೇ ಹಾಕಿಲ್ಲ.

ಬಂಟೇನಹಳ್ಳಿ ಗ್ರಾಮ ಪಂಚಾಯಿತಿಗೆ ವಾರ್ಷಿಕ 8 ಲಕ್ಷ ರೂ. ಅನುದಾನ ಬರುತ್ತಿದ್ದು, ಈ ಪೈಕಿ ಶೇ. 60ರಷ್ಟು ವಿದ್ಯುತ್ ಬಿಲ್‌ಗೆ ಹೋಗುತ್ತಿದೆ. ಸಂಬಳ ಮತ್ತಿತರ ಖರ್ಚು ಸೇರಿದರೆ ಹಳ್ಳಿಗಳ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

ಬಂಟೇನಹಳ್ಳಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಸೇರಿಸಿ 34.95 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ.

ಈ ಹಣದಲ್ಲಿ ರಸ್ತೆ ಚರಂಡಿಗೆ 27.07 ಲಕ್ಷ, ಸಮುದಾಯಭವನ ನಿರ್ಮಾಣಕ್ಕೆ 6.88 ಲಕ್ಷ, ಅಂಗನವಾಡಿ ಕಟ್ಟಡ ದುರಸ್ತಿಗೆ 1ಲಕ್ಷ  ಬಳಸಿ ಕೊಳ್ಳಲು ಉದ್ದೇಶಿಸಲಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಬಂಟೇನಹಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಪ್ರೌಢಶಾಲೆ, ಉರ್ದುಶಾಲೆ, ಅಂಚೆ ಕಚೇರಿ, ಸಾರ್ವಜನಿಕ ಗ್ರಂಥಾಲಯ ಇದೆ. ಬೀದಿ ದೀಪಗಳನ್ನು ಹಾಕಿರುವ ವಿದ್ಯುತ್ ಕಂಬಗಳಿಗೆ ಡಿ.ಪಿ. ಸ್ವಿಚ್‌ನ್ನು ಹಾಕದೆ ಕೇವಲ ತಂತಿಗಳನ್ನು ಬಿಟ್ಟಿರು ವುದು ಅಪಾಯಕ್ಕೆ ಕಾರಣವಾಗಿದೆ. ಬಂಟೇನಹಳ್ಳಿ ಗ್ರಾಮ ಬೇಲೂರು ಪಟ್ಟಣಕ್ಕೆ ಸನಿಹದಲ್ಲಿರುವುದರಿಂದ ಪುರಸಭೆಯ ವ್ಯಾಪ್ತಿಗೆ ಸೇರಿಸಿ ಕೊಳ್ಳುವ ಚಿಂತನೆಯೂ ನಡೆದಿದೆ. ಒಟ್ಟಾರೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಈ ಗ್ರಾಮಕ್ಕೆ ಕಾಯಕಲ್ಪ ಆಗ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT