ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಲ್ ಕೆರೆ: ಹೂಳಿನ ಹೊರೆ

Last Updated 2 ಸೆಪ್ಟೆಂಬರ್ 2012, 8:45 IST
ಅಕ್ಷರ ಗಾತ್ರ

ಕೊಣನೂರು: ಸಾವಿರಾರು ಎಕರೆ ಭೂ ಪ್ರದೇಶದ ಭತ್ತದ ಬೆಳೆಗೆ ನೀರುಣಿಸುತ್ತಿದ್ದ ಕಾರ್ಗಲ್ ಗ್ರಾಮದ ನಾಡ ಕೆರೆ ಅಭಿವೃದ್ಧಿಗೆ ಸರ್ಕಾರ ಕೋಟ್ಯಾಂತರ ರೂಪಾಯಿ  ವ್ಯಯಿಸಿದ್ದರೂ ಕೆರೆಯಲ್ಲಿ ನೀರು ಸಂಗ್ರಹವಾಗದೇ ಹಾಳಾಗುತ್ತಿದೆ.

ಹಾರಂಗಿ ನಾಲೆ ನಿರ್ಮಾಣಕ್ಕಿಂತ ಮುಂಚೆ ಈ ಭಾಗದ ವಿಸ್ತಾರವಾದ ಭೂ ಪ್ರದೇಶಕ್ಕೆ ನೀರುಣಿಸುತ್ತಿದ್ದ ಈ ಕೆರೆ ರೈತರ ಜೀವಾಳವಾಗಿತ್ತು. ಜೊತೆಗೆ ಒಂದು ಕಾಲಕ್ಕೆ ಭತ್ತದ ಕಣಜ ಎಂದೇ ಪ್ರಸಿದ್ದಿ ಪಡೆದಿತ್ತು. ಇದೀಗ ಕೆರೆಯ ಒಡಲಲ್ಲಿ ಹೂಳು ತುಂಬಿಕೊಂಡು ದುಸ್ಥಿತಿಗೆ ತಲುಪಿದೆ.

ಸುಮಾರು 50 ಹೆಕ್ಟೇರ್ ವಿಸ್ತೀರ್ಣದ ಕೆರೆಗೆ ನೀರು ತುಂಬಿಸಲು ಹಾಗೂ ಹೂಳು ತೆಗೆದು ಅಭಿವೃದ್ದಿ ಪಡಿಸಲು ಸರ್ಕಾರ 2008- 09ನೇ ಸಾಲಿನಲ್ಲಿ 1 ಕೋಟಿ ರೂಪಾಯಿ ಮಂಜೂರು ಮಾಡಿತ್ತು. ಈ ಕಾಮಗಾರಿ ಸಮರ್ಪಕವಾಗಿ ಮುಗಿದಿಲ್ಲ. ಕೆರೆ ಒಡಲಲ್ಲಿ ತುಂಬಿರುವ ಹೂಳನ್ನು ಸಹ ತೆಗೆದಿಲ್ಲ.

ಕೊಡಗಿನ ಮಾಲಂಬಿ ಬೆಟ್ಟದ ಕಡೆಯಿಂದ ಹಾದು ಹೋಗಿರುವ ಹಳ್ಳದ ನೀರು ಕಾರ್ಗಲ್ ಕಟ್ಟೆಯಲ್ಲಿ ಸಂಗ್ರಹಗೊಂಡಿದೆ. ಈ ನೀರು ಕಟ್ಟೆಯಿಂದ ಮುಂದೆ ಹಳ್ಳದ ಕಡೆಗೆ ವ್ಯರ್ಥವಾಗಿ ಹರಿದು ಹೋಗದಂತೆ ತಡೆಗಟ್ಟಿ ಕಿರು ನಾಲೆ ಮೂಲಕ ಕೆರೆಯತ್ತ ತರುವ ಸಲುವಾಗಿ ಸರ್ಕಾರ ಯೋಜನೆ ರೂಪಿಸಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದೆ.

ರೈತರೇ ಕಷ್ಟಪಟ್ಟು ನಾಲೆಯ ಉದ್ದಕ್ಕೂ ಹಬ್ಬಿರುವ ಮುಳ್ಳಿನ ಗಿಡಗಂಟಿ ತೆರವುಗೊಳಿಸಿ ಕೆರೆಗೆ ಸಣ್ಣ ಪ್ರಮಾಣದಲ್ಲಿ ನೀರು ಹರಿದು ಬರುವಂತೆ ಮಾಡಿದ್ದಾರೆ. ಆದರೂ ನೀರು ಮುಂದೆ ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮವಾಗಿ ಅಚ್ಚುಕಟ್ಟು ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯುವ ಜಮೀನಿಗೆ ನೀರಿನ ಕೊರತೆ ಉಂಟಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT