ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳಂಗಿ: ಸಮಸ್ಯೆಗಳ ಸರಮಾಲೆ

Last Updated 31 ಅಕ್ಟೋಬರ್ 2012, 10:20 IST
ಅಕ್ಷರ ಗಾತ್ರ

ಕೊಣನೂರು: ಮಲ್ಲಿಪಟ್ಟಣ ಹೋಬಳಿಯ ಕೊಳ್ಳಂಗಿ ಗ್ರಾಮ ಸುವರ್ಣ ಗ್ರಾಮೋದಯ ಯೋಜನೆ ವ್ಯಾಪ್ತಿಗೆ ಒಳ ಪಟ್ಟಿತಾದರೂ ಕಾಮಗಾರಿ ನಡೆಯದೆ ಅಭಿವೃದ್ಧಿಯಿಂದ ವಂಚಿತವಾಗಿದೆ.ಹೊಳಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮವನ್ನು 2007ರಲ್ಲಿಯೇ ಸುವರ್ಣ ಗ್ರಾಮೋದಯ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿತ್ತು.
 
ಇನ್ನೇನು ಕೆಲಸ ಆರಂಭವಾಗಿ ಊರು ಸರ್ವಾಂಗೀಣ ಅಭಿವೃದ್ದಿ ಕಾಣಲಿದೆ ಎಂದು ಗ್ರಾಮಸ್ಥರು ಸಹ ಕನಸು ಕಂಡಿದ್ದರು. ಕಾಮಗಾರಿ ಶುರುವಾಗುವ ಹೊತ್ತಿಗೆ ವಿಧಾನಸಭೆ ಚುನಾವಣೆ ಬಂತು. ಇದಾದ ಬಳಿಕ ಕಾಮಗಾರಿಗಳೆಲ್ಲ ನಿಂತು ಹೋದವು. ಇದರಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜ ನೆಯೇ ಹಳ್ಳ ಹಿಡಿದು ಊರು ಅಭಿ ವೃದ್ದಿಯಿಂದ ಸಂಪೂರ್ಣ ವಂಚಿತ ಗೊಂಡಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ದೊಡ್ಡಕೊಪ್ಪಲು, ಓಣಿಕೊಪ್ಪಲು, ಹೊಲದ ಮನೆ ಸೇರಿ ಮೂರು ಕೊಪ್ಪಲುಗಳು ಸಹ ಕೊಳ್ಳಂಗಿಗೆ ಹೊಂದಿ ಕೊಂಡಂತಿದ್ದು ದೊಡ್ಡ ಗ್ರಾಮವಾಗಿದೆ. ಲಿಂಗಾಯಿತ ಸಮುದಾಯದ 100, ದೇವಾಂಗ 30, ದಲಿತರು 25, ಆಚಾರ್ಯರು, ಮಡಿವಾಳರು ಹಾಗೂ ಇತರೆ ಹಿಂದುಳಿದ ವರ್ಗದವರು ಸೇರಿ 300 ಕುಟುಂಬಗಳಿವೆ. ಗ್ರಾಮದ ಯಾವುದೇ ಓಣಿ ಡಾಂಬರು ಕಂಡಿಲ್ಲ. ಮಳೆ ಬಂದರೆ  ರಸ್ತೆಗಳೆಲ್ಲ ಕೆಸರುಮಯ ವಾಗಿ ತಿರುಗಾಡಲು ಆಗುವುದಿಲ್ಲ. ಚರಂಡಿಗಳು ಸ್ವಚ್ಛತೆ ಕಂಡು ಯಾವುದೋ ಕಾಲವಾಗಿದೆ. ಹೀಗಾಗಿ ವಾಸದ ಮನೆಗಳ ಮುಂಭಾಗ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿವೆ.

ಕೊಳ್ಳಂಗಿ ಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ಊರೊಳಗಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಊರ ಮುಂಭಾಗದಿಂದ ಕೊಪ್ಪಲು ಗ್ರಾಮದವರೆಗೆ 4 ತಿಂಗಳ ಹಿಂದೆಯಷ್ಟೇ ರಸ್ತೆಗೆ ಹರಡಿದ್ದ ಜಲ್ಲಿ ಕಲ್ಲುಗಳು ಮೇಲೆದ್ದು ಹಾಳಾಗಿ ಪಾದಾಚಾರಿಗಳು ಹಾಗೂ ವಾಹನ ಓಡಾಟಕ್ಕೆ ಕಷ್ಟವಾಗಿದೆ.

ಗ್ರಾಮದಲ್ಲಿ ವೀರಭದ್ರಸ್ವಾಮಿ, ಬನಶಂಕರಿ, ಬಸವೇಶ್ವರ ಹಾಗೂ ಕನ್ನಂಬಾಡಿಯಮ್ಮ ದೇವಸ್ಥಾನಗಳಿವೆ. ಮಡಿವಾಳ ಜನಾಂಗದ ಲಕ್ಷ್ಮೀ ದೇವರ ಗುಡಿ ಶಿಥಿಲಾವಸ್ಥೆಗೆ ತಲುಪಿದೆ. ಸಿದ್ದೇಶ್ವರ ಮಠ ಕಳೆದ 30 ವರ್ಷಗಳಿಂದೀಚೆಗೆ ನಿರ್ವಹಣೆ ಯಿಲ್ಲದೇ ಸೊರಗಿದೆ. ಈ ಮಠ ಬಹು ವರ್ಷಗಳ ಹಿಂದೆಯೇ ಪ್ರಸಿದ್ಧಿ ಪಡೆದಿತ್ತು ಎಂಬುದಕ್ಕೆ ಈಶ್ವರ ದೇವಸ್ಥಾನದ ಸನಿಹದಲ್ಲಿರುವ ಸಿದ್ದಪ್ಪನವರ ಗದ್ದುಗೆಯೇ ಸಾಕ್ಷಿ.

ಈಗ ಆ ಗದ್ದುಗೆಗೆ ಹಬ್ಬ- ಹರಿ ದಿನಗಳಲ್ಲಿ ಮಾತ್ರ ಭಕ್ತರು ಪೂಜೆ ಸಲ್ಲಿಸುತ್ತಾರೆ. ಪ್ರತಿವರ್ಷವೂ ಬನಶಂಕರಿ ದೇವಸ್ಥಾನದಲ್ಲಿ ವೈಭವದ ಜಂಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ.

ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಸಹ ಅರ್ಧಕ್ಕೆ ಸ್ಥಗಿತಗೊಂಡಿದೆ. ಸಿದ್ದೇಶ್ವರ ಮಠದ ಪಕ್ಕದಲ್ಲಿರುವ ವೀರಶೈವರ ಸಮುದಾಯ ಭವನ ನಿರ್ವಹಣೆ ಯಿಲ್ಲದೇ ಪಾಳು ಬಿದ್ದಿದೆ. ಊರ ಮುಂಭಾಗದ ದೊಡ್ಡಕೆರೆ ಕೋಡಿ ಬಿದ್ದು ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸೇರಿದಂತೆ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನ ಹರಿಸಿ ಗ್ರಾಮದ ಅಭಿವೃದ್ದಿಗೆ ಮನಸ್ಸು ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT