ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುರುಪಯೋಗ: ಪರಿಶೀಲನೆ

Last Updated 10 ಫೆಬ್ರುವರಿ 2011, 7:25 IST
ಅಕ್ಷರ ಗಾತ್ರ

ಸಕಲೇಶಪುರ: ಕೇಂದ್ರ ಪುರಸ್ಕೃತ ವಿದರ್ಭ ಪ್ಯಾಕೇಜ್ ಯೋಜನೆ ಯಲ್ಲಿ, ಮೀನುಗಾರಿಕಾ ಇಲಾಖೆಯು ಮೀನು ಕೃಷಿ ಕೊಳ ನಿರ್ಮಾಣ ಸಹಾಯಧನದಲ್ಲಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಬುಧವಾರ ಲೋಕಾಯುಕ್ತ ಇಲಾಖೆಯಿಂದ ಕಾರ್ಯಪಾಲ ಎಂಜಿನಿಯರ್ ಹಾಗೂ ಲೆಕ್ಕ ಪರಿಶೋಧಕರು ಫಲಾನುಭವಿಗಳ ಕೆರೆ ನಿರ್ಮಾಣ ಪರಿಶೀಲನೆ ನಡೆಸಿದರು.

ಮೀನು ಸಾಕಣಿಕೆಗಾಗಿ ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ 8 ಫಲಾನುಭವಿಗಳ ಹೆಸರಿನಲ್ಲಿ 1.33 ಹೆಕ್ಟೇರ್ ಪ್ರದೇಶದಲ್ಲಿ 140454 ಚ.ಅಡಿ ಮೀನು ಕೃಷಿ ಕೊಳ ನಿರ್ಮಾಣ ಮಾಡಲಾಗಿದೆ. ಫಲಾನುಭವಿಗಳಿಗೆ ಇಲಾಖೆಯಿಂದ 1.17 ಲಕ್ಷ ರೂಪಾಯಿ ಸಹಾಯಧನ ನೀಡಿರುವುದಾಗಿ ದಾಖಲಿಸಲಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಲಕ್ಷಾಂತರ ರೂಪಾಯಿ ಸಹಾಯಧನ ನೀಡಿರುವುದಾಗಿ ಮೀನುಗಾರಿಕಾ ಇಲಾಖೆ 2010ರ ಏಪ್ರಿಲ್ 30ಕ್ಕೆ ಲೆಕ್ಕ ತೋರಿಸಲಾಗಿದೆ.

ತಾಲ್ಲೂಕಿನ ಅರೆಕೆರೆ ಗ್ರಾಮದ ಸ.ನಂ. 28ರಲ್ಲಿ ಚನ್ನವೀರಪ್ಪ ಅವರು ಮೀನು ಸಾಕಾಣಿಕೆಗಾಗಿ  ಕೆರೆ ನಿರ್ಮಿಸಿದ್ದಾರೆ ಎಂದು 36452 ರೂಪಾಯಿ ಸಹಾಯಧನ ನೀಡಲಾಗಿದೆ. ಅದೇ ರೀತಿ, ವಡರಹಳ್ಳಿ ಜಯಪ್ರಕಾಶ್ ಅವರಿಗೆ 7054, ಹರಗರಹಳ್ಳಿ ಸುಧಾಕರ್‌ಗೆ 10366 ರೂಪಾಯಿ, ಮೀನುವಳ್ಳಿ ಸಿದ್ಧಮ್ಮ 9300 ರೂಪಾಯಿ, ಕೆ.ಎಸ್. ಚಂದ್ರ ಶೇಖರ್‌ಗೆ 12800ರೂಪಾಯಿ ಮೆಣಸಿನಮಕ್ಕಿ ಎಂ.ಬಿ.ನಾಗೇಶ್‌ಗೆ 7839 ರೂಪಾಯಿ, ನಡಹಳ್ಳಿ ಎನ್.ಆರ್.ರಾಜಪ್ಪಗೆ 9846, ಮೋಹನ್ ಅವರಿಗೆ 23413 ರೂಪಾಯಿ ಸಹಾಯಧನ ನೀಡಿರುವುದಾಗಿ ಮೀನುಗಾರಿಕಾ ಇಲಾಖೆ ತನ್ನ ದಾಖಲೆಯಲ್ಲಿ ತೋರಿಸಿದೆ.

ಸದರಿ ಯೋಜನೆಯಲ್ಲಿ ಮೀನು ಸಾಕಾಣಿಕೆ ಮಾಡದೆ ಇದ್ದರೂ ಸಹ ಹಲವು ಫಲಾನುಭವಿಗಳ ಹೆಸರಿನಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ಇದೀಗ ಲೋಕಾಯುಕ್ತರಿಂದ ತನಿಖೆ ನಡೆಯುತ್ತಿದೆ.ಲೋಕಾಯುಕ್ತ ಕಾರ್ಯಪಾಲ ಎಂಜಿನೀಯರ್ ನಂಜಪ್ಪ ಹಾಗೂ ಲೆಕ್ಕ ಪರಿಶೋಧಕ ತಿಮ್ಮಯ್ಯ ಬುಧವಾರ ಅರೆಕೆರೆ ಗ್ರಾಮದಲ್ಲಿ ಫಲಾನುಭವಿ ಚನ್ನವೀರಪ್ಪ ಅವರ ಮೀನು ಕೃಷಿ ಕೆರೆ ಪರಿಶೀಲನೆಗಾಗಿ ಸ್ಥಳ ಭೇಟಿ ನೀಡಿದ್ದರು.

ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಫಲಾನುಭವಿ ಪುತ್ರ ಲೋಕಾಯುಕ್ತ ಅಧಿಕಾರಿಗಳಿಗೆ ಕೆರೆ ತೋರಿಸು ವುದಕ್ಕೆ ತಡವರಿಸಿದರು. ಸರ್ವೆ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ 28ರ ಸರ್ವೆ ನಂಬರ್‌ನಲ್ಲಿ ಇರುವ ಕೆರೆ ಇದು ಎಂದು ತೋರಿಸಿದರೆ, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಇದಲ್ಲ ಎಂದು ಹೇಳಿಕೆ ನೀಡುವ ಮೂಲಕ ಗೊಂದಲ ಉಂಟು ಮಾಡಿದರು.

‘ಸರಿ ಇದೇ ಕೆರೆಯಾದರೆ ಬಲೆ ಹಾಕಿ ಒಂದು ಹಿಡಿ ಮೀನು ಹಿಡಿದು ತೋರಿಸಿ’ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆ ಮಾಡಿದಾಗ, ಇಲಾಖೆ ಅಧಿಕಾರಿಗಳು ತಡವರಿಸಿದರು. ಸರ್ಕಾರಿ ಕೆರೆಯೋ ಅಥವಾ ಖಾಸಗಿ ಕೆರೆಯೋ ಎಂಬುದನ್ನು ದೃಢಪಡಿಸಿಕೊಳ್ಳಲು ಗುರುವಾರ ಮತ್ತೊಮ್ಮೆ ಸರ್ವೇ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಮೀನುಗಾರಿಕ ಇಲಾಖೆ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಾಲದ ಬಾಧೆಯಿಂದ ರೈತರ ಆತ್ಮಹತ್ಯೆಯನ್ನು ತಪ್ಪಿಸುವ ಸಲುವಾಗಿ ರೈತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ರುವಂತಹ ವಿದರ್ಭ ಪ್ಯಾಕೇಜ್ ಯೋಜನೆಯ ಹಣ ದುರ್ಬಳಕೆ ಯಾದರೆ ಕ್ಷಮಿಸಲಾರದ ಅಪರಾಧ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT