ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ಮೈ ನಡುಗಿಸುವ ಚಳಿ

ಬೆಚ್ಚನೆಯ ಉಡುಪು ಮೊರೆ ಹೋದ ಜನರು
Last Updated 8 ಜನವರಿ 2016, 6:02 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಚಳಿ ತೀವ್ರ ಹೆಚ್ಚಾಗಿದ್ದು  (ಕನಿಷ್ಠ 6 ಡಿಗ್ರಿ) ಜನರು ಗಡ ಗಡ ನಡುಗುತ್ತಿದ್ದಾರೆ. ಬೆಳಗಿನ ವೇಳೆಯಲ್ಲೂ ಸ್ವೆಟರ್‌ ಮತ್ತು ಟೋಪಿ ಇಲ್ಲದೆ ಹೊರಗಡೆ ಬರಲು ಸಾಧ್ಯವೇ ಆಗುತ್ತಿಲ್ಲ.

ರಸ್ತೆಗಳಲ್ಲಿ, ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ, ಬಯಲು ರಂಗ ಮಂದಿರದಲ್ಲಿ, ಹೇಮಾವತಿ ಕ್ರೀಡಾಂಗಣದಲ್ಲಿ ನೂರಾರು ಜನರು ಬೆಳಗಿನ ವೇಳೆ ವಾಕಿಂಗ್‌ ಮಾಡುತ್ತಿದ್ದರು. ಈಗ ಸಂಖ್ಯೆ ಬೆರಳೆಣಿಯಷ್ಟಾಗಿದ್ದು, ಅವರು ಸಹ ಸ್ವೆಟರ್‌ ಟೋಪಿ ಧರಿಸಿ ವಾಯು ವಿಹಾರಕ್ಕೆ ಬರುತ್ತಿದ್ದಾರೆ. ಕೆಲವರು ರಸ್ತೆ ಬದಿಯಲ್ಲಿ ಸಿಕ್ಕ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಬೆಂಕಿ ಕಾಯಿಸಿಕೊಳ್ಳುವುದು ಅಲ್ಲಲ್ಲಿ ಕಾಣ ಬಹುದು. ಬೆಳಗಿನ ವೇಳೆ ನಗರ ವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ನಡುಗುತ್ತಲೇ ಬೀದಿ ಕಸ ಗುಡಿಸುತ್ತಾರೆ.

‘ನಾವು ಈ ಹಿಂದೆ ನಮ್ಮೂರಲ್ಲಿ ಇಷ್ಟು ಚಳಿ ಯಾವಾಗಲೂ ಕಂಡಿರಲಿಲ್ಲ’ ಎನ್ನುತ್ತಾರೆ ಪತಿದಿನ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವ ಶೀಲಾ ಮತ್ತು ತಂಡದವರು.
‘ನಾವು ನಿತ್ಯ  ವಾಕಿಂಗ್‌ ಮಾಡುತ್ತೇನೆ. ಆದರೆ ಈ ಚಳಿಯಲ್ಲಿ ನಮಗೆ ಸಾಧ್ಯ ಇಲ್ಲ’ ಎನ್ನುತ್ತಾರೆ ದಂಪತಿ ವೃಂದಾ ಮತ್ತು ವಾಸುದೇವಮೂರ್ತಿ.

ವೈದ್ಯರ ಸಲಹೆ: ಚಳಿ ಜತೆಗೆ ಜನರಿಗೆ ಶೀತ, ನೆಗಡಿ ಹೆಚ್ಚಾಗಿದ್ದು, ಮೈ, ಕೈ ಒಡೆಯುತ್ತಿವೆ. ಚಳಿಗಾಲದಲ್ಲಿ ಜನರು ಸ್ವೆಟರ್‌, ಟೋಪಿ, ಕಾಲು ಚೀಲ ಮತ್ತು ಕೈ ಗವುಸುಗಳನ್ನು ಹಾಕಿಕೊಂಡು ಓಡಾಡಬೇಕು. ಬಿಸಿ ನೀರು ಅಥವಾ ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು, ಶೀತ ಆದವರಿಂದ ದೂರ ಇರಬೇಕು. ಸೀನುವವರು ಮತ್ತು ಕೆಮ್ಮುವವರು ಕರವಸ್ತ್ರ ಅಡ್ಡ ಹಿಡಿದಿರಬೇಕು.

ಆಸ್ತಮಾ ರೋಗಿಗಳು ಮತ್ತು ಪಾಶ್ವವಾಯು ಪೀಡಿತರು ಚಳಿಗಾಲ ಕಳೆಯುವವರೆಗೆ ವಾಯುವಿಹಾರ ಮಾಡಬಾರದು ಸಾಧ್ಯವಾದರೆ ಮನೆಯಲ್ಲಿ ಹೀಟರ್‌ ಹಾಕಿಕೊಂದು ಬೆಚ್ಚಗೆ ಇರಬೇಕು ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯ ಎದೆ ರೋಗ ತಜ್ಞ ಡಾ.ನಟರಾಜ್‌ ಹಾಗೂ ಶಸ್ತ್ರಚಿಕಿತ್ಸಾ ತಜ್ಞ ಡಾ.ಮುರಳಿ ಸಲಹೆ ನೀಡಿದ್ದಾರೆ.

ಬೆಳಗಿನ ವೇಳೆ ರಸ್ತೆ ಬದಿಯ ಕಾಫಿ ಹೋಟೆಲ್‌ಗಳಿಗೆ ಉತ್ತಮ ವ್ಯಾಪಾರ ವಾಗುತ್ತಿದೆ. ಔಷಧಿ ಅಂಗಡಿಗಳಲ್ಲಿ ವಿಕ್ಸ್‌, ಅಮೃತಾಂಜನ್‌, ನೆಗಡಿ, ತಲೆನೋವಿನ ಮಾತ್ರೆಗಳು, ವ್ಯಾಸಲೀನ್‌, ಬಾಡಿ ಲೋಷನ್‌ ಹೆಚ್ಚಾಗಿ ಖರ್ಚಾ ಗುತ್ತಿದೆ. ದಿನವೆಲ್ಲಾ ತಂಪಾದ ವಾತಾವರಣ ಇರುತ್ತಿದೆ. ಆದ್ದರಿಂದ ಕಿತ್ತಲೆ ಹಣ್ಣಿನ ಬೆಲೆ ತೀವ್ರ ಕುಸಿದಿದ್ದರೂ (ಕೆ.ಜಿಗೆ ₹ 25) ಕೇಳುವವರಿಲ್ಲದಂತಾಗಿದೆ.  ಸಂಜೆ ವೇಳೆ ಪಾನಿಪುರಿ, ಮಸಾಲೆಪುರಿ, ಗೋಬಿ ಮಂಚೂರಿ ಅಂಗಡಿಗಳಿಗೆ ಶುಕ್ರದೆಸೆ ತಿರುಗಿದೆ.

***
ಚಳಿ ಜತೆಗೆ ಜನರಿಗೆ ಶೀತ, ನೆಗಡಿ ಹೆಚ್ಚಿದ್ದು, ಮೈ, ಕೈ ಒಡೆಯುತ್ತಿವೆ. ಜನರು ಸ್ವೆಟರ್‌, ಟೋಪಿ, ಕಾಲು ಚೀಲ ಮತ್ತು ಕೈ ಗವುಸು ಧರಿಸಬೇಕು.
-ಡಾ. ಮುರಳಿ, ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT