ಶನಿವಾರ, ಏಪ್ರಿಲ್ 17, 2021
28 °C
ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಕ್ಯಾರಿ ಬ್ಯಾಗ್‌ಗೆ ‘ಪ್ರತ್ಯೇಕ ದರ‌’: ‘ಶೋರೂಂ’ ಮಾಲೀಕನಿಗೆ ₹13 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕ್ಯಾರಿ ಬ್ಯಾಗ್‌ಗೆ ‘ಪ್ರತ್ಯೇಕ ದರ’‌ ನಮೂದಿಸಿದ್ದ ಬಟ್ಟೆ ಅಂಗಡಿ ಮಾಲೀಕನಿಗೆ ₹13 ಸಾವಿರ ದಂಡ ವಿಧಿಸಿ, ಗ್ರಾಹಕನಿಗೆ ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. 

ದಾವಣಗೆರೆ ನಗರದ ಜ್ಯೋತಿ ಕೋಂ.ರಾದೇಶ ಜಂಬಗಿ ಅವರು 2019ರ ಡಿಸೆಂಬರ್‌ನಲ್ಲಿ ದಾವಣಗೆರೆಯ ‘ಲೈಫ್ ಸ್ಟೈಲ್ ಇಂಟರ್‌ ನ್ಯಾಷನಲ್‌’ ಮಳಿಗೆಯಲ್ಲಿ ಬಟ್ಟೆ ಖರೀದಿಸಿದ ಸಂದರ್ಭದಲ್ಲಿ ಕಾಗದದ ಕೈಚೀಲಕ್ಕೆ ₹7 ಹೆಚ್ಚುವರಿ ಮೊತ್ತವನ್ನು ನಮೂದಿಸಿದ್ದರು. 

ಇದನ್ನು ಪ್ರಶ್ನಿಸಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಗ್ರಾಹಕರಿಂದ ದೂರು ಸಲ್ಲಿಕೆಯಾಗಿತ್ತು. ಆಯೋಗ ಅಧ್ಯಕ್ಷರಾದ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಪ್ರಕರಣದ ವಿಚಾರಣೆ ನಡೆಸಿದರು. ಸರಕುಗಳ ಮಾರಾಟ ಕಾಯ್ದೆ-1930ರ ಪ್ರಕಾರ ಯಾವುದೇ ಮಾಲ್ ಅಥವಾ ಶೋ ರೂಮ್‍ಗಳಲ್ಲಿ ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ, ಉಚಿತವಾಗಿ ಪ್ಯಾಕಿಂಗ್‌ ಮಾಡಿಕೊಡುವುದು ಮಾರಾಟಗಾರನ ಜವಾಬ್ದಾರಿಯಾಗಿದೆ. 

ಆದ್ದರಿಂದ ಬಟ್ಟೆ ಅಂಗಡಿ ಮಾಲೀಕನು ಕಾಗದದ ಕ್ಯಾರಿ ಬ್ಯಾಗ್ ಸಲುವಾಗಿ ವಿಧಿಸಿದ ದರ ಕಾನೂನು ಬಾಹಿರವಾಗಿದೆ. ಕಾರಣ ಗ್ರಾಹಕರು ಪೇಪರ್‌ ಕ್ಯಾರಿ ಬ್ಯಾಗಿಗೆ ಭರಿಸಿದ ವೆಚ್ಚ ₹7, ಪಿರ್ಯಾದುದಾರರ ಮಾನಸಿಕ ವ್ಯಥೆಗೆ ₹1 ಸಾವಿರ ಹಾಗೂ ದಾವೆ ಖರ್ಚು ₹2 ಸಾವಿರವನ್ನು ಒಂದು ತಿಂಗಳೊಳಗೆ ಪಾವತಿಸಲು ಆದೇಶ ಹೊರಡಿಸಿದ್ದಾರೆ.

ಅನುಚಿತ ವ್ಯಾಪಾರ ಪದ್ಧತಿಗೆ ಪರಿಹಾರವಾಗಿ ₹10 ಸಾವಿರವನ್ನು ‘ಗ್ರಾಹಕ ಕಾನೂನು ನೆರವು ಖಾತೆ’ಗೆ ಜಮೆ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು