ಹಾವೇರಿ: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ನೋಂದಣಿಯಾಗಿರುವ 1,944 ಸಾರ್ವಜನಿಕ ಸೇವಾ ವಾಹನಗಳಿಗೆ (ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟಾರ್ ಕ್ಯಾಬ್) ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ಇಲ್ಲದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ಎಮರ್ಜೆನ್ಸಿ ಬಟನ್ (ಪ್ಯಾನಿಕ್ ಬಟನ್) ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ, ಸೆ.10ರ ವರೆಗೆ ಗಡುವು ನೀಡಿದೆ. ಈ ಅವಧಿಯಲ್ಲಿ ಬಟನ್ ಅಳವಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿಯೂ ಹಳದಿ ಬಣ್ಣದ ನೋಂದಣಿ ಸಂಖ್ಯೆ ಫಲಕದ ಸಾರ್ವಜನಿಕ ಸೇವಾ ವಾಹನಗಳನ್ನು ನಂಬಿಕೊಂಡು ಚಾಲಕರು ಜೀವನ ನಡೆಸುತ್ತಿದ್ದಾರೆ. ಈ ಹಿಂದಿನ ನಿಯಮದ ಪ್ರಕಾರ, ಇಂಥ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ ಮಾಡಿರಲಿಲ್ಲ. ಕೆಲ ನಗರಗಳಲ್ಲಿ ಮಾತ್ರ ಕಡ್ಡಾಯ ಮಾಡಲಾಗಿತ್ತು. ಇದೀಗ, ಇಡೀ ರಾಜ್ಯದಲ್ಲಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ.
ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆದೇಶ ಹೊರಡಿಸಿದೆ. ಜೊತೆಗೆ, ಯಾವ ರೀತಿ ಜಾರಿಗೆ ತರಬೇಕೆಂದು ಮಾರ್ಗಸೂಚಿಯನ್ನು ರೂಪಿಸಿದೆ. ಇದೇ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಪ್ರತಿಯೊಂದು ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಕಾಂಟ್ರಾಕ್ಟ್ ಕ್ಯಾರೇಜ್ ವಾಹನ, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿಕ್ಯಾಬ್, ಮೋಟಾರ್ ಕ್ಯಾಬ್ ಮತ್ತು ರಾಷ್ಟ್ರೀಯ ರಹದಾರಿ (ಪರ್ಮಿಟ್) ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ವಾಹನ, ಖಾಸಗಿ ಸೇವಾ ವಾಹನ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ವಾಹನಗಳಿಲ್ಲ. ಶಾಲಾ ವಾಹನಗಳಿದ್ದು, ಈಗಾಗಲೇ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಿಕೊಂಡಿವೆ. ಹೆಚ್ಚಿನ ಪ್ರಮಾಣದಲ್ಲಿರುವ ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟಾರ್ ಕ್ಯಾಬ್‌ಗಳಲ್ಲಿ ಮಾತ್ರ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕ್ರಮ ಜರುಗಿಸಿದ್ದಾರೆ.
‘ಜಿಲ್ಲೆಯಲ್ಲಿ 1,968 ಸಾರ್ವಜನಿಕ ಸೇವಾ ವಾಹನಗಳಿವೆ. ಈ ಪೈಕಿ ಕೇವಲ 24 ವಾಹನಗಳಲ್ಲಿ ಮಾತ್ರ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಉಳಿದ 1,944 ವಾಹನಗಳಿಗೂ ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ನಿಯಮ ಪಾಲಿಸದಿದ್ದರೆ ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶವಿದೆ’ ಎಂದು ಹಾವೇರಿ ಆರ್‌ಟಿಒ ಮುದ್ದೇಬಿಹಾಳ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್‌ಗೆ ಸಂಬಂಧಪಟ್ಟಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಈಗಾಗಲೇ ಹಲವು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದ ಎಲ್ಲ ಚಾಲಕರು, ತಮ್ಮ ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು’ ಎಂದು ಕೋರಿದರು.
‘ನಿಗದಿತ ದಿನದೊಳಗೆ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳದಿದ್ದರೆ, ಫಿಟ್ನೆಸ್ ಸರ್ಟಿಪಿಕೇಟ್ (ಎಫ್.ಸಿ) ಹಾಗೂ ಇತರೆ ಪ್ರಕ್ರಿಯೆಗಳ ಸೌಲಭ್ಯ ಅಲಭ್ಯವಾಗಲಿದೆ’ ಎಂದು ಹೇಳಿದರು.
ಚಾಲಕರ ವಿರೋಧ: ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಮಾಡಿದ್ದಕ್ಕೆ ಚಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಚಾಲಕರು, ‘ಕಡ್ಡಾಯ ಆದೇಶವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಮಹಿಳೆಯರು–ಮಕ್ಕಳ ಹಿತದೃಷ್ಟಿಯಿಂದ ವಿಎಲ್‌ಟಿ–ಪ್ಯಾನಿಕ್ ಬಟನ್ ಕಡ್ಡಾಯ ಮಾಡಲಾಗಿದೆ. ಈ ನಿಯಮವನ್ನು ಚಾಲಕರು ಪಾಲಿಸಬೇಕು. ಇಲ್ಲದಿದ್ದರೆ ಕ್ರಮ ನಿಶ್ಚಿತವಸೀಂಬಾಬಾ ಮುದ್ದೇಬಿಹಾಳ ಆರ್‌ಟಿಒ
ವಸೀಂಬಾಬಾ ಮುದ್ದೇಬಿಹಾಳ, ಆರ್‌ಟಿಒ, ಹಾವೇರಿ
‘ಸಾರ್ವಜನಿಕ ಸೇವಾ ವಾಹನಗಳನ್ನು ಹೆಚ್ಚಾಗಿ ಸಾರ್ವಜನಿಕರು ಬಳಕೆ ಮಾಡುತ್ತಾರೆ. ಅವರ ಪ್ರಯಾಣದ ಸಂದರ್ಭದಲ್ಲಿ ಯಾವುದಾದರೂ ತುರ್ತು ಸಂದರ್ಭ ಎದುರಾದರೆ ದಾಳಿಗಳು ನಡೆದರೆ ಹಾಗೂ ಇತರೆ ಯಾವುದೇ ಅಹಿತಕರ ಘಟನೆಗಳು ನಡೆದಾಗ ರಕ್ಷಣೆ ಒದಗಿಸಲು ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಸಹಾಯಕ್ಕೆ ಬರಲಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. ‘ವಾಹನ ಹಾದುಹೋಗುವ ಮಾರ್ಗವನ್ನು ಪರಿಶೀಲಿಸಲು ನಕ್ಷೆಯಲ್ಲಿ ವಾಹನದ ಸ್ಥಳವನ್ನು ಗುರುತಿಸಲು ವಿಎಲ್‌ಟಿ ನೆರವಾಗಲಿದೆ. ಅನಧಿಕೃತ ಮಾರ್ಗದಲ್ಲಿ ಚಲಿಸಿದರೂ ವಾಹನ ಎಲ್ಲಿದೆ ? ಎಂಬುದನ್ನು ಪತ್ತೆ ಹಚ್ಚಬಹುದು. ಅಪಘಾತದ ಸ್ಥಳ ವೇಗದ ವಿವರ ಎಲ್ಲವೂ ಸುಲಭದಲ್ಲಿ ಲಭ್ಯವಾಗುತ್ತದೆ’ ಎಂದರು. ‘ಸೇವಾ ವಾಹನಗಳಲ್ಲಿ ಮಹಿಳೆಯರಿಗೆ ಮಕ್ಕಳಿಗೆ ಇತರ ಪ್ರಯಾಣಿಕರಿಗೆ ತೊಂದರೆಯಾದರೆ ಪ್ಯಾನಿಕ್ ಬಟನ್ ಒತ್ತಿದರೆ ಅದರ ಸಂಕೇತವು ಇಲಾಖೆಯ ನಿಯಂತ್ರಣ ಕೊಠಡಿಗೆ ರವಾನೆಯಾಗುವುದರಿಂದ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ. ಈ ಕಾರಣಗಳಿಂದ ವಿಎಲ್‌ಟಿ ಪ್ಯಾನಿಕ್ ಬಟನ್‌ಗಳನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು ತಿಳಿಸಿದರು.
ಅಂಕಿ ಅಂಶ
* 428 ಜಿಲ್ಲೆಯಲ್ಲಿ ನೋಂದಣಿಯಾದ ಮ್ಯಾಕ್ಸಿ ಕ್ಯಾಬ್
* 1540 ಜಿಲ್ಲೆಯಲ್ಲಿ ನೋಂದಣಿಯಾದ ಮೋಟಾರ್ ಕ್ಯಾಬ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.