ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಭರ್ತಿಗೆ ₹5 ಸಾವಿರ ಕೋಟಿ

₹ 185 ಕೋಟಿ ವೆಚ್ಚದಲ್ಲಿ 88 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ: ಸಿಎಂ ಹೇಳಿಕೆ
Last Updated 7 ಮಾರ್ಚ್ 2020, 14:26 IST
ಅಕ್ಷರ ಗಾತ್ರ

ಹಾವೇರಿ: ‘ಅನುದಾನದ ಇತಿಮಿತಿಯಲ್ಲಿಯೂ ರಾಜ್ಯ ಬಜೆಟ್‍ನಲ್ಲಿ ಏತ ನೀರಾವರಿ ಯೋಜನೆಗಳಿಗೆ ₹5 ಸಾವಿರ ಕೋಟಿ ಕಾಯ್ದಿರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ದೂದಿಹಳ್ಳಿ ಮೊರಾರ್ಜಿ ದೇಸಾಯಿ ನೂತನ ಕಟ್ಟಡದ ಲೋಕಾರ್ಪಣೆ ಸೇರಿದಂತೆ ₹ 330.94 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶನಿವಾರ ಹಿರೇಕೆರೂರಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರವೂ ರೈತರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದು, ರೈತರಿಗೆ ನೆಮ್ಮದಿಯ ಬದುಕು ಕಲ್ಪಿಸಲು ಸಂಕಲ್ಪ ಮಾಡಲಾಗಿದೆ.ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವ ಗುರಿ ಹಾಕಿಕೊಳ್ಳಲಾಗಿದೆ. ರೈತರ ಬೆಳೆಗೆ ನೀರು ಹಾಗೂ ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ ರೈತ ನೆಮ್ಮದಿ, ಗೌರವ ಹಾಗೂ ಸ್ವಾಭಿಮಾನದಿಂದ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಸಕ್ತ ಆಯವ್ಯಯದಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಹಿರೇಕೆರೂರು ಭಾಗದ ಜನರ ಬಹು ದಿನಗಳ ಬೇಡಿಕೆಯಾದ ಸರ್ವಜ್ಞ ಏತ ನೀರಾವರಿ ಯೋಜನೆ ಜಾರಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಗೆ ₹185 ಕೋಟಿ ಒದಗಿಸಲಾಗಿದೆ. 88 ಕೆರೆಗಳನ್ನು ತುಂಬಿಸುವ ಈ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಯಾಗಿ ಹಿರೇಕೆರೂರಿನ 58 ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ 30 ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಳದಿಂದ ಕೃಷಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಸಕ್ತ ಆಯವ್ಯಯದಲ್ಲಿ ಜಿಲ್ಲೆಯಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಸ್ಥಾಪನೆಗೆ ₹ 20 ಕೋಟಿ ಒದಗಿಸಲಾಗಿದೆ. ಶಿಗ್ಗಾವಿಯಲ್ಲಿ ನೂತನ ಜವಳಿ ಪಾರ್ಕ್ ₹5 ಕೋಟಿ ಅನುದಾನ ಒದಗಿಸಲಾಗಿದೆ. ಸಂತ ಶಿಶುನಾಳ ಶರೀಫರ ಸಮಾಧಿ ಇರುವ ಶಿಶುನಾಳ ಗ್ರಾಮದ ಅಭಿವೃದ್ಧಿಗೆ ₹5 ಕೋಟಿ ಘೋಷಿಸಲಾಗಿದೆ. ಹಿರೇಕೆರೂರು ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ’ದ ವಿವಿಧ ಕಾರ್ಯಕ್ರಮಗಳಿಗಾಗಿ ಪ್ರೋತ್ಸಾಹ ನೀಡಲಾಗುವುದು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು. ಕರ್ನಾಟಕ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಯು.ಬಿ. ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೃಹ ಸಚಿವ ಬಸವರಾಜ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಜಿ.ಪಂ.ಅಧ್ಯಕ್ಷ ಬಸವನಗೌಡ ದೇಸಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿ.ಪಂ.ಸದಸ್ಯರಾದ ಸಿದ್ಧರಾಜ ಕಲಕೋಟಿ ಇದ್ದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸ್ವಾಗತಿಸಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT