ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆ: ಅಲೆಮಾರಿಗಳು ಅತಂತ್ರ, ಗಂಜಿಕೇಂದ್ರದಲ್ಲಿ ವಾರದ ಕೂಸು!

ಗುಡಿಸಲುಗಳು ಜಲಾವೃತ, ನಿರಾಶ್ರಿತವಾದವು 26 ಕುಟುಂಬಗಳು
Last Updated 7 ಆಗಸ್ಟ್ 2019, 19:08 IST
ಅಕ್ಷರ ಗಾತ್ರ

ಹಾವೇರಿ: ವಾರದ ಹಿಂದಷ್ಟೇ ಜನಿಸಿದ ಆ ಮಗು, ತಾಯಿಯ ಅಪ್ಪುಗೆಯಲ್ಲಿ ಬೆಚ್ಚಗೆ ಮಲಗಬೇಕಿತ್ತು. ಕೂಸು ಹುಟ್ಟಿದ ಖುಷಿಗೆ ಅಜ್ಜಿ–ತಾತ ಕೂಡ ಇಡೀ ಸಮುದಾಯಕ್ಕೆ ಸಿಹಿ ಹಂಚಿ ಸಂಭ್ರಮಿಸಬೇಕಿತ್ತು. ಆದರೀಗ, ಧಾರಾಕಾರ ಮಳೆಗೆ ಗುಡಿಸಲಿನ ಜತೆಗೆ ಅವರ ಆಸೆಗಳೂ ಮುಳುಗಿ ಹೋಗಿವೆ. ಆ ಕೂಸು ಈಗ ಗಂಜಿಕೇಂದ್ರದಲ್ಲಿ ಅಮ್ಮನ ಆರೈಕೆ ಪಡೆಯುತ್ತಿದೆ!‌

ಅದೇ ಗಂಜಿಕೇಂದ್ರದ ಇನ್ನೊಂದು ಮೂಲೆಯಲ್ಲಿಎರಡು ವರ್ಷದ ಮಗುವೊಂದು ಜ್ವರ ಬಂದು ಮಲಗಿದೆ. ಅಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಆದರೂ, ಜ್ವರ ಮಾತ್ರ ಕಮ್ಮಿ ಆಗಿಲ್ಲ. ಇಷ್ಟೆಲ್ಲ ಮನಕಲಕುವ ದೃಶ್ಯಗಳ ನಡುವೆಯೂ ಅಲ್ಲಿ ‘ನಮಗೆ ನಿವೇಶನ ಬೇಕು...’‌ ಎಂಬ ಕೂಗು ಪ್ರತಿಧ್ವನಿಸುತ್ತಲೇ ಇದೆ.

ಶಾಂತಿನಗರ ಹೊರವಲಯದ ಗುಡಿಸಲುಗಳಲ್ಲಿ ವಾಸವಾಗಿದ್ದ 26 ಅಲೆಮಾರಿ ಕುಟುಂಬಗಳು, ಈಗ ಮಳೆಯ ವಿಕೋಪಕ್ಕೆ ಗುರಿಯಾಗಿ ನಿರಾಶ್ರಿತವಾಗಿವೆ. ಜಿಲ್ಲಾಡಳಿತವು ನಾಗೇಂದ್ರನಮಟ್ಟಿ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಗಂಜಿಕೇಂದ್ರ ಸೇರಿರುವ ಅವರು, ನಿವೇಶನದ ಆಸೆ ತೋರಿಸಿ ಓಟು ಒತ್ತಿಸಿಕೊಂಡ ಜನಪ್ರತಿನಿಧಿಗಳನ್ನು ಶಪಿಸುತ್ತಾ ಸಮಯ ದೂಡುತ್ತಿದ್ದಾರೆ.

ಬೆಚ್ಚಗಿಡೋದು ಹೇಗೆ: ‘ಹೆರಿಗೆ ಮುಗಿಸಿಕೊಂಡು ಆಸ್ಪತ್ರೆಯಿಂದ ಹಟ್ಟಿಗೆ ಹೋಗುವಷ್ಟರಲ್ಲಿ ಗುಡಿಸಲು ಜಲಾವೃತವಾಗಿತ್ತು. ಅದೇ ಜಾಗದಲ್ಲಿಮುರಿದ ಮಂಚದ ಮೇಲೆ ನಾಲ್ಕೈದು ದಿನ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಹಸುಗೂಸನ್ನು ಆರೈಕೆ ಮಾಡಿಕೊಂಡೆ. ಸೋಮವಾರ ರಾತ್ರಿ ಗುಡಿಸಲು ಕೊಚ್ಚಿ ಹೋಯಿತು. ಅಲ್ಲೇ ಯಾರದ್ದೋ ಮನೆಯಲ್ಲಿ ಆಶ್ರಯ ಪಡೆದು ಮಂಗಳವಾರ ಗಂಜಿಕೇಂದ್ರಕ್ಕೆ ಬಂದಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ಬೆಚ್ಚಗೆ ಇಡೋದು ಹೇಗೆ’ ಎಂದು ಬಾಣಂತಿ ಚನ್ನಮ್ಮ ದುಃಖಪತ್ತರಾದರು.

‘ನಾವು ಸುಡುಗಾಡ ಸಿದ್ಧ ಸಮುದಾಯಕ್ಕೆ ಸೇರಿದವರು. ಸುಮಾರು 40 ವರ್ಷಗಳಿಂದ ಹಾವೇರಿಯಲ್ಲಿದ್ದೇವೆ. ಮೊದಲು ಬಸ್ ನಿಲ್ದಾಣದ ಪಕ್ಕದ ದಾನೇಶ್ವರಿನಗರ, ನಾಗೇಂದ್ರನಮಟ್ಟಿ, ಅಶ್ವಿನಿನಗರದಲ್ಲಿ ಗುಡಿಸಲು ಹಾಕಿಕೊಂಡು ವಾಸವಿದ್ದೆವು. 2008ರಲ್ಲಿ ಶಾಶ್ವತ ಸೂರಿನ ಆಸೆ ತೋರಿಸಿ ನಮ್ಮನ್ನು ಶಾಂತಿನಗರಕ್ಕೆ ತಂದು ಬಿಟ್ಟರು. ಅಲ್ಲಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ’ ಎಂದುಅಲೆಮಾರಿ ಸಮುದಾಯದ ಅಧ್ಯಕ್ಷ ಬಸವರಾಜ್ ಬಾದಗಿ ನೋವು ತೋಡಿಕೊಂಡರು.

‘ಪ್ರತಿ ಸಲ ಮಳೆ ಬಂದಾಗಲೂ, ಇಲ್ಲಿ ಗಂಜಿಕೇಂದ್ರ ತೆರೆದು ಕೂಡಿಟ್ಟು ಊಟ ಹಾಕುತ್ತಾರೆ. ಮಳೆ ನಿಂತ ಕೂಡಲೇ ಕೇಂದ್ರದಿಂದ ಖಾಲಿ ಮಾಡಿಸುತ್ತಾರೆ. ಆ ನಂತರ ಮತ್ತೆ ನಮ್ಮ–ಅವರ ಭೇಟಿ ಮುಂದಿನ ಮಳೆಗಾಲಕ್ಕೇ! ಅಲೆಮಾರಿಗಳು ಎಂಬ ಕಾರಣಕ್ಕೆ ಜನಪ್ರತಿನಿಧಿಗಳು ಕಾಲು ಕಸದಂತೆ ನೋಡಿಕೊಳ್ಳುತ್ತಿದ್ದಾರೆ‌’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌ಮಗನ ಮಗ್ಗುಲಲ್ಲೇ ಮಲಗಿತ್ತು ಹಾವು!

‘ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಮಳೆಯಾಗುತ್ತಿತ್ತು. ಆಗ ನನ್ನ ಮುರುಕಲು ಮನೆಯಲ್ಲಿ ಹಾವು–ಚೇಳುಗಳ ಕಾಟ ಶುರುವಾಯಿತು. ಆ ದಿನ ರಾತ್ರಿ ನಿದ್ರೆಗೆ ಜಾರಿದ್ದ7 ವರ್ಷದ ಮಗ ಯೋಗೇಶ, ಬೆಳಿಗ್ಗೆ ಎಷ್ಟೇ ಪ್ರಯತ್ನಿಸಿದರೂ ಎದ್ದೇಳಲಿಲ್ಲ. ಮಗನನ್ನು ಬದಿಗೆ ಉರುಳಿಸಿದರೆ ಪಕ್ಕದಲ್ಲೇ ದೊಡ್ಡ ನಾಗರಹಾವು ಮಲಗಿತ್ತು. ಮಗ ಹಾವು ಕಚ್ಚಿ ಸತ್ತೇ ಹೋಗಿದ್ದ’ ಎಂದು ಕಣ್ಣೀರಿಟ್ಟ ಈರಮ್ಮ, ತಮ್ಮ ಸಂಬಂಧಿಗಳು ಆ ಹಾವನ್ನು ಹೊಡೆದು ಸಾಯಿಸಿದ್ದ ಫೋಟೊವನ್ನೂ ತೋರಿಸಿದರು. ‘ಕೊಟ್ಟ ಮಾತಿನಂತೆ ನಿವೇಶನ ನೀಡಿದರೆ ಹೇಗೋ ಮನೆ ಕಟ್ಟಿಸಿಕೊಂಡು ಬದುಕುತ್ತೇವೆ’ ಎಂದು ಅವರು ಮನವಿ ಮಾಡಿದರು.

ಗಂಗಳ ತೋರಿಸ್ತಾರೆ, ಅನ್ನ ಹಾಕಲ್ಲ!

ಪ್ರತಿ ಸಲ ಚುನಾವಣೆ ಬಂದಾಗಲೂ ಜನಪ್ರತಿನಿಧಿಗಳು ನಮ್ಮ ಹಟ್ಟಿಗೆ ಬರುತ್ತಾರೆ. ‘ಈ ಬಾರಿ ಖಂಡಿತಾ ನಿಮಗೆಲ್ಲ ನಿವೇಶನ ಮಂಜೂರು ಮಾಡ್ತೀವಿ’ ಎಂದು ಆಸೆ ಹುಟ್ಟಿಸುತ್ತಾರೆ. ತಟ್ಟೆ, ಚೊಂಬು, ಲೋಟ ಕೊಟ್ಟು ಬಡ ಜನರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಆದರೆ, ಚುನಾವಣೆ ಮುಗಿದ ಬಳಿಕ ನಮ್ಮತ್ತ ಯಾರೂ ಬರಲ್ಲ. ಗಂಗಳ ತೋರಿಸಿದ್ರೆ ಏನು ಬಂತು. ಅದಕ್ಕೆ ಅನ್ನ ಹಾಕಬೇಕಲ್ವಾ

- ಬಸವರಾಜ್ ಬಾದಗಿ

**

ನಾಲ್ಕು ಟ್ರಂಕ್ ಮನವಿ ಪತ್ರಗಳು

ಮೊದಲು ಭಿಕ್ಷಾಟನೆ ಮಾಡಿ ಬದುಕುತ್ತಿದ್ದೆವು. ಆದರೆ, ಸರ್ಕಾರ ಅದನ್ನೂ ಅಪರಾಧ ಎಂದಿದ್ದರಿಂದ ಕೂಲಿ ಕೆಲಸ ಹುಡುಕಿಕೊಂಡೆವು. ಜಾತ್ರೆಗಳಲ್ಲಿ ಆಟಿಕೆಗಳನ್ನು ಮಾರಲಾರಂಭಿಸಿದೆವು. ಸಿಕ್ಕ–ಸಿಕ್ಕ ಚಾಕರಿಗಳನ್ನು ಮಾಡಿಕೊಂಡೆವು. ಜೀವನದ ಜೊತೆ ಎಷ್ಟೇ ಹೋರಾಡಿದರೂ ಸ್ವಂತ ಸೂರು ಕಟ್ಟಿಕೊಳ್ಳುವ ತಾಕತ್ತು ನಮಗಿಲ್ಲ.ನಿವೇಶನ ನೀಡುವಂತೆ ಸ್ಥಳೀಯ ಅಧಿಕಾರಿಗಳಿಂದ ಹಿಡಿದು, ಮುಖ್ಯಮಂತ್ರಿಗಳವರೆಗೆ ಎಲ್ಲರಿಗೂ ಮನವಿಪತ್ರಗಳನ್ನು ಕೊಟ್ಟಿದ್ದೇವೆ. ಅವು ಈಗ ನಾಲ್ಕು ಟ್ರಂಕ್ ತುಂಬಿವೆ. ಆದರೆ, ಸರ್ಕಾರ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ

- ಪೀರಪ್ಪ, ನೊಂದ ಅಲೆಮಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT