ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ:ರುದ್ರಪ್ಪ ಲಮಾಣಿ

ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘ: ರುದ್ರಪ್ಪ ಲಮಾಣಿ
Published 29 ಜೂನ್ 2024, 16:08 IST
Last Updated 29 ಜೂನ್ 2024, 16:08 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘ ಪ್ರಪ್ರಥಮ ಬಾರಿಗೆ ರಾಣೆಬೆನ್ನೂರಿನಿಂದ ಆರಂಭವಾಗಿದ್ದು, ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆಯಾಗಿದೆ. ಮಹಿಳೆಯರು ತಮ್ಮ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು’ ಎಂದು ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಸಂಸ್ಕರಣದಾರರ ಮಹಿಳಾ ಸಹಕಾರ ಸಂಘ ನಿಯಮಿತದ 22 ಎಫ್‌ಡಬ್ಲ್ಯುಸಿಗಳ ನೋಂದಣಿ ಪ್ರಮಾಣ ಪತ್ರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಮಹಿಳಾ ಸಂಘಟನೆಗಳು ಉತ್ಪಾದನೆ ಮಾಡಿದ ಆಹಾರೋತ್ಪನ್ನಗಳು ಮಾರುಕಟ್ಟೆ ಹಾಗೂ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಮುಖ್ಯ ಪ್ರವರ್ತಕರ ಸಭೆ ನಡೆಸಿ ಸರ್ಕಾರದ ಸೌಲಭ್ಯ ದೊರಕಿಸಿಕೊಡಲು ಜಿಲ್ಲೆಯ ಎಲ್ಲ ಶಾಸಕರು ಕೈ ಜೋಡಿಸುತ್ತೇವೆ’ ಎಂದರು.

‘ಸ್ತ್ರೀ ಶಕ್ತಿ ಸಂಘಕ್ಕೆ ಉತ್ತೇಜನ ನೀಡಿದವರು ಮೋಟಮ್ಮ. ಅವರೇ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತಷ್ಟು ಶಕ್ತಿ ಬಂದಿದೆ. ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ ರಾಣೆಬೆನ್ನೂರಿನಿಂದ ಆರಂಭವಾಗಿದ್ದು, ಇದು ರಾಷ್ಟ್ರಮಟ್ಟದಲ್ಲಿ ಮಾದರಿಯಾಗಬೇಕು. ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ, ಆರ್ಥಿಕ ಸ್ಥಿರತೆ ಮೂಡಿಸುವ ಸಂಕಲ್ಪ ಯಶಸ್ವಿಯಾಗಲಿ’ ಎಂದು  ಹಾರೈಸಿದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ‘ಮಹಿಳೆಯರು ಅವರ ಕಾಲ ಮೇಲೆ ನಿಲ್ಲುವಂತೆ ಮಾಡಬೇಕು. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತವಾಗಬಾರದು. ದೇಶವನ್ನು ವಿಶ್ವ ಗುರು ಮಾಡುವುದು ಮಹಿಳೆಯರಿಂದ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ನಮ್ಮ ಪಿಕೆಕೆ ಸಂಸ್ಥೆಯಿಂದ ಮಹಿಳೆಯರಿಗೆ ಕೌಶಲ ತರಬೇತಿ ನೀಡಿ ಸ್ವಂತ ಉದ್ಯೋಗಕೈಗೊಳ್ಳಲು ಮುಂದಾಗಿದೆ’ ಎಂದರು.

‘ಮಹಿಳೆಯರು ವಿವಿಧ ಕೌಶಲ ಅಳವಡಿಸಿಕೊಳ್ಳಬೇಕು. ರೊಟ್ಟಿ, ಉಪ್ಪಿನಕಾಯಿ, ಹಪ್ಪಳ, ಸ್ಯಾಂಡಿಗೆ, ಶ್ಯಾವಿಗೆ ಪದಾರ್ಥಗಳಿಗೆ ಹೊಸ ರೂಪ ಕೊಟ್ಟು ಬ್ರ್ಯಾಂಡ್‌ ಮಾಡಿ ಅಂತರರಾಷ್ಟ್ರೀಯ ಮಾರುಕಟ್ಟೆ ತಲುಪಬೇಕು. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಮಹಿಳೆಯರಿಗೆ ಶಕ್ತಿ ತುಂಬಿವೆ. ಜಿಲ್ಲೆಯ ಶಾಸಕರು ಮತ್ತು ಸಂಸದರು ಸೇರಿ ಮಾಜಿ ಸಚಿವೆ ಮೋಟಮ್ಮ ಮತ್ತು ಮುಖ್ಯ ಪ್ರವರ್ತಕಿ ರುಕ್ಮಿಣಿ ಸಾಹುಕಾರ ಅವರಿಗೆ ಶಕ್ತಿ ತುಂಬುತ್ತೆವೆ’ ಎಂದು ಭರವಸೆ ನೀಡಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ‘ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎನ್ನುವ ಪರಿಕಲ್ಪನೆ ಬಹಳ ಹಿಂದಿನಿಂದ ಇದೆ’ ಎಂದ ಅವರು, ‘ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ವರದಕ್ಷಿಣೆ ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ತರಲು ಈ ಸಂಘಟನೆ ಮೂಲಕ ಹೋರಾಟಕ್ಕಿಳಿದು ನ್ಯಾಯ ಸಿಗುವವರೆಗೂ ಪ್ರತಿಭಟಿಸಬೇಕು’ ಎಂದರು. 

ಮಹಿಳೆಯರು ತಯಾರಿಸಿದ ಉತ್ಪಾದನೆಯನ್ನು ತೆಗೆದುಕೊಂಡು ಹೋಗಲು ಎಜನ್ಸಿ ಹುಡುಕಲು ಅಧಿಕಾರಿಗಳಿಗೆ ಸೂಚಿಸಿದರು.

ಪಿಕೆಕೆ ಸಂಸ್ಥೆಯ ರುವಾರಿ ಪೂರ್ಣಿಮಾ ಪ್ರಕಾಶ ಕೋಳಿವಾಡ ಮಾತನಾಡಿದರು. ಮುಖ್ಯ ಪ್ರವರ್ತಕಿ ರುಕ್ಮಿಣಿ ಸಾವುಕಾರ ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರ ಬಸವರಾಜ ತಿಪ್ಪಾಯಿಕೊಪ್ಪ,
ಗದಗ ಕೆಎಂಎಫ್‌ ನಿರ್ದೇಶಕ ಎಚ್‌.ಜಿ. ಹಿರೇಗೌಡ್ರ, ಹಾವೇರಿ ಉಪವಿಭಾಗದ ಸಹಾಯಕ ನಿಬಂದಕ ವಿಕ್ರಂ ಕುಲಕರ್ಣಿ ಮತ್ತು ಸಂತೋಷ ಮಾಡಳ್ಳಿ, ಶ್ರೀನಿವಾಸ ನಲವಾಗಲ, ನಗರಸಭೆ ಸದಸ್ಯೆ ಜಯಶ್ರೀ ಪಿಸೆ, ಮೆಣಸಿನಹಾಳ, ಎಪಿಎಂಸಿ ಸಹಾಯಕ ನಿರ್ದೇಶಕ ಪರಮೇಶ್ವರ್ ನಾಯಕ, ಮೂಡಿಗೆರೆ ರಮೇಶ, ಪ್ರಕಾಶ್ ತಾವರೆ ಹಾಗೂ ಜಿಲ್ಲೆಯ 25 ಸಂಘಗಳ ಪ್ರವರ್ತಕಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT