ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಡಿಕಲ್‌ ಕಾಲೇಜು ಕಾಮಗಾರಿಯ ವೇಗ ಹೆಚ್ಚಿಸಿ

ಫೆ.14ರೊಳಗೆ ಬಾಕಿ ಉಳಿದ ಜಿಲ್ಲೆಯ ಯೋಜನೆಗಳ ಮಾಹಿತಿ ಒದಗಿಸಿ: ಸಚಿವ ಶಿವರಾಮ ಹೆಬ್ಬಾರ್‌
Last Updated 7 ಫೆಬ್ರುವರಿ 2022, 14:31 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಯ ವೇಗ ಹೆಚ್ಚಿಸಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಲೇಜಿಗೆ ಅಗತ್ಯವಿರುವ ಪೂರಕ ಬೇಡಿಕೆಗಳ ಮಾಹಿತಿ ಹಾಗೂ ಸರ್ಕಾರದ ಹಂತದಲ್ಲಿ ಬೇಕಾದ ನೆರವು ಕುರಿತ ವಿವರವಾದ ಮಾಹಿತಿಯನ್ನು ಕ್ರೋಡೀಕರಿಸಿ ಫೆ.14ರೊಳಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆ.14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರನ್ನು ಆಹ್ವಾನಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯವರೇ ರಾಜ್ಯದ ಮುಖ್ಯಮಂತ್ರಿಗಳಿದ್ದಾರೆ. ಈ ಸುವರ್ಣ ಅವಕಾಶ ಬಳಸಿಕೊಂಡು ಹೊಸ ಚಿಂತನೆ, ಹೊಸ ಯೋಜನೆಗಳಿಂದ ಜನಪರವಾದ ಕಾರ್ಯಕ್ರಮಗಳನ್ನು ಇಲಾಖಾವಾರು ರೂಪಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಿ. ರಾಜ್ಯ ಮಟ್ಟದಲ್ಲಿ ಯೋಜನೆಗಳ ಮಂಜೂರಾತಿ ಸೇರಿದಂತೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ. ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ತಪ್ಪು ಮಾಡಿದರೆ ಮತ್ತು ಅಭಿವೃದ್ಧಿಯಲ್ಲಿ ಹಿನ್ನಡೆಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

55 ದಿನಗಳು ಬಾಕಿ:

ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಕೇವಲ 55 ದಿನಗಳು ಬಾಕಿ ಇವೆ. ಮಾರ್ಚ್ 31ಕ್ಕೆ ಇಲಾಖಾವಾರು ಬಿಡುಗಡೆಯಾದ ಅನುದಾನ ಆರ್ಥಿಕ ಮತ್ತು ಭೌತಿಕ ಪ್ರಗತಿ ಶೇ 100ರಷ್ಟು ಆಗಬೇಕು. ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ಬಹಳ ಕಠಿಣ. ಹೀಗಾಗಿ ಅನುದಾನ ವಾಪಸ್‌ ಹೋಗದಂತೆ ನೋಡಿಕೊಳ್ಳಿ ಎಂದರು.

ವರ್ಷಾಂತ್ಯದ ಗಡುವು:

ವೈದ್ಯಕೀಯ ಕಾಲೇಜಿನ ಪ್ರಗತಿ ಕುರಿತಂತೆ ವಿಶೇಷಾಧಿಕಾರಿ ಉದಯ ಮುಳುಗುಂದ ಅವರಿಂದ ಸಮಗ್ರ ಮಾಹಿತಿ ಪಡೆದ ಸಚಿವರು, ₹325 ಕೋಟಿ ಅಂದಾಜು ವೆಚ್ಚದ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಈಗಾಗಲೇ ₹123.46 ಕೋಟಿ ಬಿಡುಗಡೆ ಮಾಡಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಕಟ್ಟಡ ಕಾಮಗಾರಿ ಪ್ರಗತಿ ಸಾಧ್ಯವಾಗಿಲ್ಲ. ಡಿ.22ರೊಳಗೆ ಕಾಮಗಾರಿ ಮುಗಿಸಬೇಕಾಗಿದೆ. ಕಾಮಗಾರಿ ವೇಗ ಹೆಚ್ಚಿಸಿ ಕುಡಿಯುವ ನೀರು, ರಸ್ತೆ ಸಂಪರ್ಕ ಸೇರಿದಂತೆ ಪೂರಕ ಬೇಡಿಕೆಗಳನ್ನು ಸಲ್ಲಿಸಿದರೆ ಬೇಡಿಕೆ ಈಡೇರಿಸಲಾಗುವುದು ಎಂದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ಕಟ್ಟುವಲ್ಲಿ ಉತ್ತಮ ಸಾಧನೆಯಾಗಿದೆ. ಆದರೆ ಶೌಚಾಲಯ ಬಳಕೆಯಲ್ಲಿ ಶೇ 100ರಷ್ಟು ಸಾಧನೆಯಾಗಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕು.ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಬಸವ ವಸತಿ ವಸತಿ ಯೋಜನೆಯಡಿ ಜಿಲ್ಲೆಗೆ 7,630 ಮನೆಗಳು ಮಂಜೂರಾಗಿದೆ. ಶೀಘ್ರವೇ ಗ್ರಾಮ ಸಭೆ ನಡೆಸಿ ಫಲಾನುಭವಿಗಳ ಆಯ್ಕೆಮಾಡಿ ರಾಜೀವಗಾಂಧಿ ವಸತಿ ನಿಗಮಕ್ಕೆ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಮೀಟರ್‌ ಅಳವಡಿಸುವುದು ಕರ ವಸೂಲಿಗಲ್ಲ!

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಮನೆ– ಮನೆಯ ನಳಕ್ಕೆ ಮೀಟರ್ ಅಳವಡಿಸುವ ಕುರಿತಂತೆ ಜನರು ಆತಂಕದಲ್ಲಿದ್ದಾರೆ. ಕರ ವಸೂಲಿಗೆ ಮೀಟರ್ ಅಳವಡಿಸುತ್ತಿದ್ದಾರೆ ಎಂದು ಗಾಬರಿಗೊಂಡಿದ್ದಾರೆ. ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಸಿಇಒ ಜನರಿಗೆ ಮಾಹಿತಿ ನೀಡಬೇಕು ಎಂದರು.

ಸಿಇಒ ಮೊಹಮ್ಮದ್‌ ರೋಶನ್‌ ಪ್ರತಿಕ್ರಿಯಿಸಿ, ನೀರಿನ ನಳಕ್ಕೆ ಮೀಟರ್ ಅಳವಡಿಸುವುದು ಕರವಸೂಲಿಗಲ್ಲ, ಈ ಯೋಜನೆಯಡಿ ಪ್ರತಿ ಮನೆಯ ಪ್ರತಿ ಸದಸ್ಯನಿಗೆ 55 ಎಲ್.ಸಿ.ಡಿ. ನೀರು ಪೂರೈಸುವ ಸರ್ಕಾರದ ನಿಯಮದಂತೆ ನೀರಿನ ಪೂರೈಕೆ ಪ್ರಮಾಣವನ್ನು ಅಳತೆ ಮಾಡಲು ಮಾತ್ರ ಎಂದು ಹೇಳಿದರು.

ಸಿಇಒ ಕಾರ್ಯಕ್ಕೆ ಮೆಚ್ಚುಗೆ

ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯ ಮಾಹಿತಿ ಪಡೆದ ಸಚಿವರು, ಯೋಜನೆಯ ಅನುಷ್ಠಾನದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಅವರ ವಿಶೇಷ ಕಾಳಜಿ ಮತ್ತು ಉತ್ತಮ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಲಜೀವನ ಮಿಷನ್‌ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಹಾವೇರಿ 3ನೇ ಸ್ಥಾನ, ಬೂದು ನೀರು ನಿರ್ವಹಣೆ, ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ಟೋಪೋ ಸರ್ವೆ ಪೂರ್ಣಗೊಳಿಸುವಲ್ಲಿ ವಿಶೇಷ ಸಾಧನೆ ಮಾಡಿದ ಸಿಇಒ ಅವರನ್ನು ಸಚಿವರು ಸನ್ಮಾನಿಸಿದರು.

ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್‌, ಆರ್.ಶಂಕರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT