ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆಗೆ ಮುಂದಾಗಿ: ಭಾರತಿ

ವಿವಿಧ ಸಮಿತಿಗಳ ಕಾರ್ಯ ಪರಿಶೀಲನೆ: ದತ್ತು ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲು ಸಲಹೆ
Last Updated 9 ಡಿಸೆಂಬರ್ 2020, 15:37 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್‍ ಸಂದರ್ಭದಲ್ಲಿ ಮಕ್ಕಳು ಕಾರ್ಮಿಕರಾಗಿ ಕೆಲಸ ಮಾಡುವುದು ಹಾಗೂ ಪೋಕ್ಸೊಪ್ರಕರಣಗಳಿಗೆ ಒಳಗಾಗುವುದನ್ನು ತಡೆಯಲು ತಂಡವಾಗಿ ದಾಳಿ ನಡೆಸಿ, ಮಕ್ಕಳ ರಕ್ಷಣೆಗೆ ಮುಂದಾಗಿ ಎಂದು ಇಲಾಖಾ ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಾಲ ನ್ಯಾಯ ಕಾಯ್ದೆ-2015ರ ಅನುಷ್ಠಾನ, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಅನುಷ್ಠಾನ, ಪೋಕ್ಸೋ ಕಾಯ್ದೆ-2012ರ ಅನುಷ್ಠಾನ, ಆರ್.ಟಿ.ಇ. ಕಾಯ್ದೆ ಅನುಷ್ಠಾನ ಕುರಿತಂತೆ ವಿವಿಧ ಸಮಿತಿಗಳ ಕಾರ್ಯ ಪರಿಶೀಲನೆ ನಡೆಸಿದರು.

ಮಕ್ಕಳ ದತ್ತು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಮಕ್ಕಳ ಪೋಷಣೆಗೆ ಪಾಲಕರ ಮನವೊಲಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಬಾಲ ನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಸಮಾಧಾನ: ‘ಸರ್ಕಾರದ ಆರೈಕೆ ರಕ್ಷಣೆಗೆ ಬೇಕಾದ ಮಕ್ಕಳ ಬಗ್ಗೆ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮಿತಿಗಳಲ್ಲಿ ಬದಲಾವಣೆಯಾಗಿಲ್ಲ, ಮಕ್ಕಳ ಪಾಲನೆ ಮತ್ತು ರಕ್ಷಣೆಯಲ್ಲಿ ಸುಧಾರಣೆಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಪರಿಶೀಲನೆ, ಇಲ್ಲಿ ದಾಖಲಾಗಿರುವ ಮಕ್ಕಳ ಕೌನ್ಸಲಿಂಗ್ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಕ್ರಮಬದ್ಧವಾಗಿ ಸಮಿತಿಗಳನ್ನು ರಚಿಸಿಕೊಳ್ಳಬೇಕು. ಮಕ್ಕಳ ಕೌನ್ಸಲರ್‌ಗಳನ್ನು ನೇಮಕ ಮಾಡಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ವಿವಿಧ ಸಮಿತಿಯ ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT