ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪ ಕಾಣದ ಅಕ್ಕಮಹಾದೇವಿ ಹೊಂಡ

ನಗರ ಕೇಂದ್ರದಲ್ಲಿರುವ ಕೆರೆ: ಅಭಿವೃದ್ಧಿಗೆ ದೊರೆಯದ ಸ್ಥಳೀಯರ ಸಹಕಾರ!
Last Updated 24 ಜೂನ್ 2018, 17:36 IST
ಅಕ್ಷರ ಗಾತ್ರ

ಹಾವೇರಿ: ಸಂಜೆ ಅಥವಾ ವಾರಂತ್ಯದಲ್ಲಿ ವಿಹರಿಸಲು ಸೂಕ್ತ ತಾಣಗಳ ಕೊರತೆಯು ಜಿಲ್ಲಾ ಕೇಂದ್ರದಲ್ಲಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ನಗರ ಮಧ್ಯದಲ್ಲಿರುವ ಅಕ್ಕನ (ಅಕ್ಕಮಹಾದೇವಿ) ಹೊಂಡವು ಪ್ರಮುಖ ತಾಣವಾಗಿದ್ದರೂ ಅಭಿವೃದ್ಧಿ ಕಂಡಿಲ್ಲ. ಇದಕ್ಕೆ ಕಾಯಕಲ್ಪ ಕಲ್ಪಿಸಬೇಕು ಎಂಬುದು ನಗರವಾಸಿಗಳ ಬಹುದಿನಗಳ ಬೇಡಿಕೆ.

ನಗರದಲ್ಲಿ ಹಲವು ಕಾಲೇಜುಗಳು, ಶಾಲೆಗಳು, ವಿವಿಧ ಕಚೇರಿಗಳಿದ್ದರೂ ಸಂಜೆ ಅಥವಾ ವಾರಾಂತ್ಯದ ವಿಹಾರಕ್ಕೆ ಸೂಕ್ತ ಸ್ಥಳಗಳು ವಿರಳ. ಹಿರಿಯರೆಲ್ಲ ಸಂಜೆ ಕ್ರೀಡಾಂಗಣದ ಕಟ್ಟೆಗಳನ್ನು ಅವಲಂಬಿಸಿದರೆ, ಮಕ್ಕಳಿಗೆ ಬೀದಿ ಬದಿಯೇ ಗತಿ. ಹೀಗಾಗಿ, ನಗರದ ಕೇಂದ್ರಸ್ಥಾನದಲ್ಲಿರುವ ಅಕ್ಕನಹೊಂಡವನ್ನು ಅಭಿವೃದ್ಧಿ ಪಡಿಸಿದರೆ ಸೂಕ್ತ ಎಂಬುದು ಜನರ ಅಭಿಪ್ರಾಯ.

ಸುಮಾರು ಆರು ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ಪ್ರಾಧಿಕಾರವುಅಂದಾಜುಎರಡು ಕೋಟಿ ವೆಚ್ಚದಲ್ಲಿ ಅಕ್ಕನಹೊಂಡವನ್ನು ಅಭಿವೃದ್ಧಿ ಪಡಿಸಿತ್ತು. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಮತ್ತೆ ಅಸ್ತವ್ಯಸ್ತಗೊಂಡಿತ್ತು. ಸುತ್ತಲಿನ ಕೆಲವರು ತಮ್ಮ ಎಲ್ಲ ಕೆಲಸಗಳಿಗೂ ಕೆರೆ ಮತ್ತು ಆವರಣವನ್ನು ಅವಲಂಬಿಸುತ್ತಿದ್ದು, ತ್ಯಾಜ್ಯವೂ ಕೆರೆಗೆ ಸೇರಿ ಮಲಿನಗೊಂಡಿತ್ತು. ಪುಂಡಪೋಕರಿಗಳ ಹಾವಳಿಯಿಂದ ಸುತ್ತಲ ಉದ್ಯಾನ ಅಂದಗೆಟ್ಟಿತ್ತು.

ಎರಡು ವರ್ಷಗಳ ಹಿಂದೆ ನಗರಸಭೆ ಸದಸ್ಯರೆಲ್ಲ ಸೇರಿಕೊಂಡು ಅಕ್ಕನಹೊಂಡವನ್ನು ಸ್ವಚ್ಛಗೊಳಿಸಿದ್ದರು. ಈಚೆಗೆ ವಿವಿಧ ಪಕ್ಷಗಳು, ಸಂಘಟನೆಗಳು ಸತತ ಶ್ರಮದಾನದ ಮೂಲಕ ಆವರಣವನ್ನು ಸ್ವಚ್ಛಗೊಳಿಸಿದ್ದರು. ಆದರೆ, ಹೊಂಡದ ಆವರಣದ ಪರಿಸ್ಥಿತಿ ಮಾತ್ರ ಅದೇ ಸ್ಥಿತಿಗೆ ಮರಳಿತ್ತು.

ಹೊಂಡದ ಉದ್ಯಾನದ ರಕ್ಷಣೆಯ ದೃಷ್ಟಿಯಿಂದ ನಗರಸಭೆ ಪೌರಾಯುಕ್ತ ಬಿ.ಎಸ್. ಶಿವಕುಮಾರಯ್ಯ ಅವರು, ಸಂಜೆಯ ತಿನಿಸಿನ ಗಾಡಿ–ಬಂಡಿಗಳಿಗೆ ಅಲ್ಲಿ ಸ್ಥಳಾವಕಾಶ ಕಲ್ಪಿಸಿದ್ದರು. ಅನಂತರ ಸಂಜೆ ಮತ್ತು ರಾತ್ರಿ ಪುಂಡ ಪೋಕರಿಗಳ ಕಾಟ ಇಳಿಕೆಯಾಗಿದೆ. ಆದರೆ, ಬಂಡಿಗಳು, ಗಾಡಿಗಳಿಗೆ ಸಮರ್ಪಕವಾದ ಜಾಗ, ಸ್ವಚ್ಚತೆ, ಉದ್ಯಾನ ಅಭಿವೃದ್ದಿಗೆ ನಗರಸಭೆ ಮುತುವರ್ಜಿ ವಹಿಸದ ಕಾರಣ ಉದ್ಯಾನ ಇದ್ದೂ ಇಲ್ಲದಂತಾಗಿದೆ.

‘ಅಕ್ಕನ ಹೊಂಡದಲ್ಲಿ ಬೋಟಿಂಗ್‌, ಮಕ್ಕಳ ಆಟಗಳು, ತಿಂಡಿ–ತಿನಿಸು, ಮನೋರಂಜನೆಗೆ ಕಾರಂಜಿ, ವಿವಿಧ ಪ್ರತಿಮೆಗಳು, ಹೂವಿನ ಗಿಡ ಬೆಳೆಸಿ ಅಭಿವೃದ್ಧಿ ಪಡಿಸುವ ಉದ್ದೇಶ ನಗರಸಭೆಗೆ ಇದೆ. ಆದರೆ, ಇದಕ್ಕೆ ಸ್ಥಳೀಯರ ಸಹಕಾರ ಬಹುಮುಖ್ಯ. ಸ್ಥಳೀಯ ಸಂಸ್ಥೆಗಳು ಅಥವಾ ಸರ್ಕಾರವು ಏನೇ ನಿರ್ಮಿಸಿದರೂ, ರಕ್ಷಣೆ ಮಾಡುವುದು ಸ್ಥಳೀಯರ ಜವಾಬ್ದಾರಿ ಆಗಿರುತ್ತದೆ’ ಎಂದು ನಗರಸಭೆ ಸದಸ್ಯ ರಮೇಶ ಕಡಕೋಳ ತಿಳಿಸಿದರು.


ಪುನಶ್ಚೇತನ ಕಾಣದ ಕೆರೆ:

ಅಂತರ್ಜಲ ವೃದ್ಧಿ, ವಿಹಾರ ತಾಣ, ಜೀವ ವೈವಿಧ್ಯ, ಗಿಡಮರಗಳ ಬೆಳವಣಿಗೆ, ಅಗ್ನಿ ಅವಘಡ ಸಂದರ್ಭದ ತುರ್ತು ನೆರವು, ಮೀನುಗಾರಿಕೆ ಸೇರಿದಂತೆ ಕೆರೆಯಿಂದ ಹಲವು ಉಪಯೋಗಗಳಿವೆ. ಅಂತಹ ಬಹುಪಯೋಗಿ ಕೆರೆಯ ಪುನಶ್ಚೇತನ ಕಾರ್ಯ ಮಾತ್ರನಡೆದಿಲ್ಲ.

‘ಕೆಂಚಾರಗಟ್ಟಿಯಿಂದ ನಗರಕ್ಕೆ ನೀರು ಪೂರೈಸುವ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಅಕ್ಕನ ಹೊಂಡಕ್ಕೆ ಬಿಡಲಾಗಿತ್ತು. ಹೀಗಾಗಿ ಕೆರೆಯಲ್ಲಿ ನೀರಿದೆ. ಅಲ್ಲದೇ, ಸುತ್ತ ಅಂತರ್ಜಲ ಮಟ್ಟ ಹೆಚ್ಚಿದೆ’ ಎಂದು ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ ತಿಳಿಸಿದರು.

ಅಕ್ಕಮಹಾದೇವಿ ಹೊಂಡದ ಅಭಿವೃದ್ಧಿಗೆ ಹಲವು ಬಾರಿ ಅನುದಾನ ಮಂಜೂರಾದರೂ, ಅಭಿವೃದ್ಧಿ ಕಂಡಿಲ್ಲ. ಕೆರೆ ಉದ್ಯಾನ ಅಭಿವೃದ್ಧಿ ಪಡಿಸುವ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಯತ್ನವೂ ಅರ್ಧಕ್ಕೆ ನಿಂತಿದೆ. ಸ್ಥಳೀಯವಾಗಿ ಕೆರೆ ಸಂರಕ್ಷಣೆ ಸಮಿತಿ ರಚಿಸಿಕೊಂಡು, ಆ ಮೂಲಕ ಕೆರೆಯ ರಕ್ಷಣೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.

ಯಾವುದೇ ಕೆರೆ, ಉದ್ಯಾನಗಳ ರಕ್ಷಣೆಗೆ ಸ್ಥಳೀಯರ ಸಹಕಾರ ಅತ್ಯಗತ್ಯ. ಸಹಕಾರ ಸಿಗದ ಕಾರಣ ಅಕ್ಕನ ಹೊಂಡ ಅಭಿವೃದ್ಧಿ ಕಂಡಿಲ್ಲ
–ರಮೇಶ ಕಡಕೋಳ,ನಗರಸಭೆ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT