ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳನ್ನು ಕೊಂದ ಆರೋಪಿಗಳನ್ನು ಬಂಧಿಸಿ: ಕುಟುಂಬಸ್ಥರ ಆಕ್ರೋಶ

Last Updated 3 ಜೂನ್ 2022, 4:59 IST
ಅಕ್ಷರ ಗಾತ್ರ

ಹಾವೇರಿ: ವರದಕ್ಷಿಣೆ ಕಿರುಕುಳ ನೀಡಿ, ಮಗಳನ್ನು ಕೊಲೆಗೈದ ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿಗದಗ ತಾಲ್ಲೂಕಿನ ಕಿರಿಟಗೇರಿ ಗ್ರಾಮದ ಮೃತ ಮಹಿಳೆಯ ಕುಟುಂಬದವರು ನಗರದ ಎಸ್ಪಿ ಕಚೇರಿ ಎದುರು ಗುರುವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.

ಮಗಳನ್ನು ಕೊಲೆಗೈದ ಆರೋಪಿಗಳ ವಿರುದ್ಧ ಗುತ್ತಲ ಪೊಲೀಸ್‌ ಠಾಣೆಯಲ್ಲಿ ನಾವು ದೂರು ದಾಖಲಿಸಿದ್ದೆವು. ಇದರಿಂದ ಸಿಟ್ಟಿಗೆದ್ದ ಪತಿಯ ಕುಟುಂಬದವರು ನಮ್ಮ ವಿರುದ್ಧ ಕೊಲೆ ಯತ್ನದ ಸುಳ್ಳು ದೂರು ನೀಡಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕಾದ ಪೊಲೀಸರು, ಆರೋಪಿಗಳು ನೀಡಿರುವ ದೂರು ದಾಖಲಿಸಿಕೊಂಡು, ನಮ್ಮನ್ನು ಪದೇ ಪದೇ ಪೊಲೀಸ್‌ ಠಾಣೆಗೆ ಕರೆಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯರು ಕಣ್ಣೀರು ಸುರಿಸಿದರು.

ಮೃತ ಅಮೃತಾಳ ಸಂಬಂಧಿಕರಾದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಗೀತಾ ಮುಂಡರಗಿ, ಈರವ್ವ ಮುಂಡರಗಿ, ಚನ್ನವ್ವ ನಾಗನಗೌಡ ಮರಿಗೌಡ್ರ, ವೀರೇಶಗೌಡ ಮರಿಗೌಡ್ರ, ದಾನಪ್ಪಗೌಡ ಮರಿಗೌಡ್ರ, ಯಲ್ಲಪ್ಪಗೌಡ ಮರಿಗೌಡ್ರ ಮುಂತಾದವರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ಮೃತಳ ಕುಟುಂಬಸ್ಥರು ಕಣ್ಣೀರು, ಕೂಗಾಟದಿಂದ ಎಸ್ಪಿ ಕಚೇರಿ ಎದುರು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಮತ್ತು ಮೃತಳ ಕುಟುಂಬಸ್ಥರ ನಡುವೆ ವಾಗ್ವಾದವೂ ನಡೆಯಿತು. ನಂತರ ಪೊಲೀಸ್‌ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿ, ಮಾತುಕತೆಗೆ ಕರೆದರು.

ಏನಿದು ಪ್ರಕರಣ?
‘ಗದಗ ತಾಲ್ಲೂಕು ಕಿರಿಟಗೇರಿ ಗ್ರಾಮದ ಅಮೃತಾ (ಸರಸ್ವತಿ) ಎಂಬುವವರನ್ನು ಹಾವೇರಿ ತಾಲ್ಲೂಕಿನ ತಿಮ್ಮೇನಹಳ್ಳಿಯ ಕುಮಾರ ದಾಸಣ್ಣನವರ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಬಾಕಿ ₹2.5 ಲಕ್ಷ ವರದಕ್ಷಿಣೆ ಕೊಟ್ಟಿಲ್ಲ ಎಂದು ಅಮೃತಾ ಅವರಿಗೆ ಪತಿಯ ಮನೆಯವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ, ಕೊಲೆ ಮಾಡಿದ್ದಾರೆ’ ಎಂದು ಅಮೃತಾಳ ಸಂಬಂಧಿ ಯಲ್ಲಪ್ಪಗೌಡ ಮಾರ್ಚ್‌ನಲ್ಲಿ ಗುತ್ತಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT