ಬ್ಯಾಡಗಿ: ಪಟ್ಟಣದಲ್ಲಿ ಆಶ್ರಯ ಯೋಜನೆಯಡಿ ಜಿ+1 ಮನೆ ನಿರ್ಮಿಸುವ ಕನಸು ಕಮರಿ ಹಲವು ವರ್ಷವಾಗಿದೆ. ನಿವೇಶನವಾದರೂ ಸಿಗಬಹುದೆಂದು ಫಲಾನುಭವಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಅವರಿಗೆ ಇದುವರೆಗೂ ನಿವೇಶನ ಸಿಕ್ಕಿಲ್ಲ. ಫಲಾನುಭವಿಗಳು ನಿವೇಶನಕ್ಕಾಗಿ ಅಲೆದಾಡುತ್ತಿದ್ದು, ಅವರ ಹೋರಾಟಕ್ಕೂ ಆಡಳಿತ ವ್ಯವಸ್ಥೆ ಕಿವಿಗೂಡುತ್ತಿಲ್ಲ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಎಡವಟ್ಟಿನಿಂದಾಗಿ ನಿವೇಶನ ಪಡೆಯಲು ಇನ್ನೂ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ವರ್ಷಗಳ ಹಿಂದೆ ₹ 30 ಸಾವಿರ ಸಾಲ ಪಡೆದು ರಾಜೀವ ಗಾಂಧಿ ಹೌಸಿಂಗ್ ನಿರ್ಮಾಣ ಸಂಸ್ಥೆಗೆ ಭರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವೇಶಕ್ಕಾಗಿ ಅರ್ಜಿ ಹಾಕಿದ ನೂರಾರು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಿವೇಶನವಾದರೂ ದೊರೆಯಬಹುದು ಎನ್ನುವ ಆಶಾ ಭಾವನೆಗೆ ಈಗ ತಣ್ಣೀರು ಸುರಿದಂತಾಗಿದೆ. ನಗರ ಆಶ್ರಯ ಸಮಿತಿ ರಚನೆಯಾಗಿದ್ದರೂ ಜನರ ಸಮಸ್ಯೆಗೆ ಪರಿಹಾರ ದೊರೆಯದೇ ನಿರೀಕ್ಷೆ ಮರೀಚಿಕೆಯಂತಾಗಿದೆ.

ಅಭಿವೃದ್ಧಿ ಕಾಣದ ಬಡಾವಣೆ: ಕೇವಲ ಸುಣ್ಣ ಹಚ್ಚಿದ ಕಲ್ಲುಗಳನ್ನು ನಿಲ್ಲಿಸಿದ್ದು, ಹಕ್ಕು ಪತ್ರ ವಿತರಣೆಗೂ ಮೊದಲು ಜಾಗವನ್ನು ಸ್ವಚ್ಛಗೊಳಿಸಿ ಕಚ್ಚಾಚರಂಡಿಗಳನ್ನು ನಿರ್ಮಿಸಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ರಸ್ತೆ, ಚರಂಡಿ, ನಿರಂತರ ಕುಡಿಯುವ ನೀರಿನ ಯೋಜನೆ, ವಿದ್ಯುತ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಲ್ಲ. ನಿಯಮದಂತೆ ಹಕ್ಕು ಪತ್ರ ವಿತರಣೆಗೂ ಮೊದಲು ಬಡಾವಣೆಯನ್ನು ಅಭಿವೃದ್ಧಿಪಡಿಸಿ ಮೂಲ ಸೌಲಭ್ಯ ಕಲ್ಪಿಸಬೇಕಿತ್ತು. ಆದರೆ ಬಡಾವಣೆಯ ಅಭಿವೃದ್ಧಿ ಕೈಗೊಳ್ಳಲು ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುವ ಸಿದ್ಧ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಆಯ್ಕೆ ಪಟ್ಟಿಯಲ್ಲಿರುವ ಫಲಾನುಭವಿಗಳು ಆರೋಪಿಸಿದ್ದಾರೆ.

‘ಮನೆ ಇಲ್ಲದಿರುವ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದರೂ ಕೇವಲ 390 ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಆಶ್ರಯ ಸಮಿತಿ ಸಾಕಷ್ಟು ಲೋಪಗಳನ್ನು ಮಾಡಿದೆ. ನಿಜವಾದ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ವಿಫಲವಾಗಿರುವ ಸಮಿತಿ ಆಯ್ಕೆಯಲ್ಲಿ ಹಣದ ವ್ಯವಹಾರ ನಡೆದಿರುವ ಅನುಮಾನವಿದೆ’ ಎಂದು ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ ಆರೋಪಿಸಿದರು.

‘14 ವರ್ಷಗಳಿಂದ ಸೂರು ಇಲ್ಲದವರು ನಿವೇಶನ ಪಡೆಯಲು ಹೋರಾಟ ನಡೆಸುತ್ತಿದ್ದಾರೆ. ವಸತಿ ಸಚಿವ ಜಮೀರ್ ಅಹಮ್ಮದ ಖಾನ್ ಅವರು ಹಕ್ಕುಪತ್ರ ವಿತರಿಸಿದವರಲ್ಲಿ ಸಾಕಷ್ಟು ಜನರು ಮನೆಯುಳ್ಳವರಿದ್ದಾರೆ. ಪ್ರಭಾವಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಲಾಗಿದೆ. ನಿಜವಾದ ಫಲಾನುಭವಿಗಳನ್ನು ಹೊರಗಿಟ್ಟು ಆಯ್ಕೆ ನಡೆದಿದ್ದು ಅದನ್ನು ಕೂಡಲೇ ರದ್ದುಪಡಿಸಿ ಹೊಸ ಆಯ್ಕೆ ಪಟ್ಟಿ ಸಿದ್ಧಪಡಿಸಬೇಕು’ ಎಂದು ನಿವೇಶನ ಸಿಗದವರು ಆರೋಪಿಸಿದ್ದಾರೆ.

‘10ಕ್ಕೂ ಹೆಚ್ಚು ಮೃತರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಮನೆಯುಳ್ಳವರು ಪಟ್ಟಿಯಲ್ಲಿದ್ದಾರೆ. ನಿಜವಾದ ಬಡವರಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸಿ ಹೊಸ ಪಟ್ಟಿ ಸಿದ್ಧಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ₹ 10 ಕೋಟಿ ವೆಚ್ಚದಲ್ಲಿ 10.14 ಎಕರೆ ಜಮೀನು ಖರೀದಿಸಿ 814 ಫಲಾನುಭವಿಗಳನ್ನು ಆಯ್ಕೆಗೊಳಿಸಿ, ಜಿ+1 ಮಾದರಿ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗಿತ್ತು. ಆದರೆ ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ಹಂಚಿಕೆ ಸ್ಥಗಿತಗೊಂಡಿತ್ತು.

‘ಮನೆಗಳಿರುವ ಫಲಾನುಭವಿಗಳ ಹೆಸರು ಕಡಿತ’

419 ನಿವೇಶನಗಳಲ್ಲಿ 29 ಮೂಲೆ ನಿವೇಶನಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಮಾರಾಟ ಮಾಡಲಾಗುತ್ತದೆ. ಉಳಿದವನ್ನು ಮನೆ ಇಲ್ಲದವರಿಗೆ ಮಾತ್ರ ನೀಡಲಾಗುತ್ತದೆ. ಇದುವರೆಗೆ 60ಕ್ಕೂ ಹೆಚ್ಚು ಫಲಾನುಭವಿಗಳು ಸಣ್ಣ ಪುಟ್ಟ ಮನೆಗಳನ್ನು ಹೊಂದಿರುವುದು ಸಮೀಕ್ಷೆಯಿಂದ ಮಾಹಿತಿ ಲಭ್ಯವಾಗಿದೆ. ಆಯ್ಕೆ ಪಟ್ಟಿಯಲ್ಲಿರುವ ಫಲಾನುಭವಿಗಳ ಪೈಕಿ ಐದಾರು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ನಗರ ಆಶ್ರಯ ಸಮಿತಿಯ ಗಮನಕ್ಕೆ ತರಲಾಗಿದೆ. ಶಾಸಕರು ಸೂಚಿಸಿದ ದಿನದಂದು ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ತಿಳಿಸಿದರು. ಸದ್ಯದ ಆಯ್ಕೆ ಪಟ್ಟಿಯಲ್ಲಿ 35ಕ್ಕೂ ಹೆಚ್ಚು ಜನ ಮನೆಯುಳ್ಳವರು ಇರುವುದು ಕಂಡು ಬಂದಿದೆ. ಅವರ ಹೆಸರು ಕಡಿಮೆಗೊಳಿಸಿ ಇನ್ನುಳಿದವರನ್ನು ಆಯ್ಕೆ ಮಾಡಬೇಕಿದೆ. ಹೀಗಾಗಿ ಶಾಸಕರು ದಿನಾಂಕ ನಿಗದಿಪಡಿಸಿದ ಬಳಿಕ ಅಂತಿಮ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಲಾಗುವುದು ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ಮುನಾಫ್ ಎರೇಶೀಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.