ಮಂಗಳವಾರ, ಮಾರ್ಚ್ 9, 2021
31 °C

ಬಿ.ಸಿ.ಪಾಟೀಲ ಸ್ವತಂತ್ರ; ಶಂಕರ್ ಅತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ:‌  ‘ಮೈತ್ರಿ’ ಸರ್ಕಾರ ಉಳಿಸುವ ಸಲುವಾಗಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿ ಸಚಿವ ಸ್ಥಾನ ಸ್ವೀಕರಿಸಿದ್ದ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಅವರು, ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಪ್ರಸ್ತುತರಾಗಿದ್ದಾರೆ.‌

ಮೊದಲು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಇವರು, ಪಕ್ಷ ನಿಷ್ಠೆ ಮರೆತು ಕಾಂಗ್ರೆಸ್ ಜಿಗಿದಿದ್ದರು. ಹೀಗಾಗಿ, ಮುಂಬರುವ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಸಾಧ್ಯತೆ ಕ್ಷೀಣವಾಗಲಿದ್ದು, ಅವರ ಸ್ಥಿತಿ ಅತಂತ್ರವಾಗಲಿದೆ ಎಂದೇ ಹೇಳಲಾಗುತ್ತಿದೆ. ‘ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ’ ಎಂದು ಹೇಳುವ ಮೂಲಕ ಅವರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. 

ಕ್ಷಮೆಯಾಚಿಸಿದ ಪಾಟೀಲ:

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಕ್ಷೇತ್ರದ ಜನತೆಗೆ ಹಾಗೂ ಕಾರ್ಯಕರ್ತರಿಗೆ ಕ್ಷಮೆಯಾಚಿಸಿರುವ ಬಿ.ಸಿ.ಪಾಟೀಲ, ‘ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಈ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಯಿತು’ ಎಂದು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಭಾನುವಾರ ಸಂದೇಶ ರವಾನಿಸಿದ್ದಾರೆ.

‘ರಾಜಕೀಯ ಗೊತ್ತಿಲ್ಲದ ನಾನು, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಆದರೂ ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ನಾನೂ ಕೈಲಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಿಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್ ನಮ್ಮ ತಾಲ್ಲೂಕಿಗೆ ತುಂಬ ಅನ್ಯಾಯ ಮಾಡಿದೆ. ಬೇರೆಯವರಿಗೆ ಮಂತ್ರಿ ಪದವಿ ಕೊಟ್ಟು ದ್ರೋಹ ಮಾಡಿದೆ. ಇದರಿಂದ ನಮ್ಮ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಪಾಟೀಲ ಹೇಳಿದ್ದಾರೆ. 

‘ಈ ಬೆಳವಣಿಗೆಗಳಿಂದ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದೇನೆ. ನಿಮ್ಮ ಸಲಹೆ ಸೂಚನೆಗಳನ್ನು ಪಡೆದುಕೊಂಡೇ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಒಟ್ಟಿನಲ್ಲಿ ನಮ್ಮ ಜಿಲ್ಲೆ, ತಾಲ್ಲೂಕು ಅಭಿವೃದ್ಧಿಯಾಗಬೇಕು. ಅದಕ್ಕಾಗಿ ನನ್ನನ್ನು ಕ್ಷಮಿಸಿ’ ಎಂದು ಮನವಿ ಮಾಡಿದ್ದಾರೆ.

ಬಣಕಾರ ನಡೆ ನಿಗೂಢ:

ಪಾಟೀಲ ಅವರ ರಾಜೀನಾಮೆ ಹಿರೇಕೆರೂರು ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಯು.ಬಿ.ಬಣಕಾರ ಅವರು ಕೇವಲ 555 ಮತಗಳ ಅಂತರದಿಂದ ಪಾಟೀಲ ವಿರುದ್ಧ ಸೋಲು ಅನುಭವಿಸಿದ್ದರು. ಈಗ ಪಾಟೀಲ ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಬಣಕಾರ ಅವರ ಸ್ಥಿತಿ ಏನು? ಅವರು ಏನು ಮಾಡಬಹುದು ಎಂಬ ಕುತೂಹಲ ಕ್ಷೇತ್ರದ ಜನರದ್ದು.

‘ಪಾಟೀಲ ರಾಜೀನಾಮೆ ನೀಡಿರುವುದಷ್ಟೇ ಗೊತ್ತು. ಅವರು ಬಿಜೆಪಿ ಸೇರುವುದಾಗಿ ಎಲ್ಲೂ ಹೇಳಿಲ್ಲ. ಹೀಗಾಗಿ, ಸದ್ಯಕ್ಕೆ ಏನೂ ಹೇಳುವುದಿಲ್ಲ. ಅವರು ತಮ್ಮ ನಿರ್ಧಾರ ಪ್ರಕಟಿಸಿದ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಬಣಕಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು