ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ ಎಪಿಎಂಸಿ | ದಾಂಧಲೆ ಮಾಡಿದವರು ರೈತರಲ್ಲ: ಶಾಸಕ ಬಸವರಾಜ ಶಿವಣ್ಣನವರ

ಬ್ಯಾಡಗಿ ಎಪಿಎಂಸಿ: ಶಾಸಕ ಬಸವರಾಜ ಶಿವಣ್ಣನವರ ಶಂಕೆ
Published 12 ಮಾರ್ಚ್ 2024, 15:54 IST
Last Updated 12 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಬ್ಯಾಡಗಿ: ‘ಮೆಣಸಿನಕಾಯಿ ದರದಲ್ಲಿ ಸೋಮವಾರ ಕುಸಿತವಾಗಿದೆ ಎಂದು ಆರೋಪಿಸಿ ಸಾವಿರಾರು ಮಂದಿ ದಾಂಧಲೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿದವರು ನಿಜವಾದ ರೈತರಲ್ಲ. ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಪ್ಪುಚುಕ್ಕೆ ತಂದವರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ’ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಅಧಿಕಾರಿಗಳ ಮತ್ತು ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ‘ಬ್ಯಾಡಗಿ ಮಾರುಕಟ್ಟೆ ಎತ್ತರಕ್ಕೆ ಬೆಳೆಯಲು ವರ್ತಕರ, ರೈತರ ಹಾಗೂ ಕೂಲಿ ಕಾರ್ಮಿಕರ ನೂರಾರು ವರ್ಷಗಳ ಶ್ರಮವಿದೆ. ಇದನ್ನು ಅರ್ಥೈಸಿಕೊಳ್ಳಲಾಗದ ಕಿಡಗೇಡಿಗಳು ಬೆಲೆಯಲ್ಲಿ ಕುಸಿತವಾಗಿದೆ ಎನ್ನುವ ನೆಪವನ್ನಿಟ್ಟುಕೊಂಡು ದಾಂಧಲೆ ನಡೆಸಿ ಕೋಟ್ಯಾಂತರ ಮೌಲ್ಯದ ಆಸ್ತಿ ನಾಶಪಡಿಸಿದ್ದಾರೆ. ರೈತರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.

ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ‘ವರ್ತಕರು ಮಾತನಾಡಿಕೊಂಡು ಟೆಂಡರ್‌ ಹಾಕಿದ್ದಾರೆ ಎನ್ನುವ ವದಂತಿ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಕಳೆದೆರಡು ತಿಂಗಳಿಂದ ಮಾರುಕಟ್ಟೆಗಳನ್ನು ಪರಿಶೀಲಿಸಿದಲ್ಲಿ ರೈತರಿಗೆ ನಿಜವಾದ ಸತ್ಯಾಂಶ ತಿಳಿಯಲಿದೆ. ಮಾರುಕಟ್ಟೆ ಸ್ಥಾಪನೆಯಾದಾಗಿನಿಂದ ಇಂತಹ ಘಟನೆಗಳು ಸಂಭವಿಸಿಲ್ಲ. ಇಲ್ಲಿಯ ವರ್ತಕರು ಸದಾ ಪಾರದರ್ಶಕ ವ್ಯಾಪಾರದ ಮೂಲಕ ರೈತರ ಶ್ರೇಯಸ್ಸನ್ನು ಬಯಸುವಂತವರು. ಇಂತಹ ಮಾರುಕಟ್ಟೆಗೆ ಕಳಂಕ ತರುವ ನಿಟ್ಟಿನಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದಿದ್ದು ನನ್ನ ಮನಸ್ಸಿಗೆ ನೋವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವರ್ತಕ ಎಸ್.ಆರ್.ಪಾಟೀಲ ಮಾತನಾಡಿ, ‘ಪ್ರತಿ ಮಾರುಕಟ್ಟೆಗೆ ಲಕ್ಷಾಂತರ ಚೀಲ ಮೆಣಸಿನಕಾಯಿ ಮಾರಾಟಕ್ಕೆ ಬರುತ್ತಿದೆ. ಹೆಚ್ಚು ನೀರು ಹಾಕಿಕೊಂಡು ತರುವ ಮೆಣಸಿನಕಾಯಿಯನ್ನು ಮತ್ತೆ ಒಣಗಿಸಿ ರವಾನಿಸಲು ಕನಿಷ್ಠ ಎಂಟು ದಿನಗಳ ಕಾಲಾವಕಾಶ ಬೇಕು. ಇದರಿಂದ ಅನಗತ್ಯ ವಿಳಂಬವಾಗಲಿದ್ದು ಸ್ಥಳಾವಕಾಶದ ಕೊರತೆಯಿಂದ ಇದು ಕಷ್ಟ. ಹೀಗಾಗಿ ವಾರದಲ್ಲಿ ಒಂದು ದಿನ ಮಾತ್ರ ಮಾರುಕಟ್ಟೆ ವಹಿವಾಟು ನಡೆಸುವ ನಿರ್ಧಾರಕ್ಕೆ ಬರಬೇಕಾಯಿತು’ ಎಂದು ಹೇಳಿದರು.

ಜಿಲ್ಲಾಧಿಕಾರಿ ರಘುನಂದನಮೂರ್ತಿ, ಎಸ್‌ಪಿ ಅಂಶುಕುಮಾರ್, ಉಪವಿಭಾಗಾಧಿಕಾರಿ ಚನ್ನಪ್ಪ, ಎಪಿಎಂಸಿ ಆಡಳಿತಾಧಿಕಾರಿ ಎಸ್.ಬಿ.ನ್ಯಾಮಗೌಡ, ಕಾರ್ಯದರ್ಶಿ ಎಚ್.ವೈ.ಸತೀಶ, ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್‌.ಮೋರಿಗೇರಿ ಇದ್ದರು.

ಬ್ಯಾಡಗಿ ಮಾರುಕಟ್ಟೆ ಸ್ಥಗಿತಗೊಂಡರೆ ವರ್ತಕರು ಇನ್ನೊಂದು ಕಡೆ ವಹಿವಾಟು ನಡೆಸುತ್ತಾರೆ. ಆದರೆ ಇದನ್ನೇ ನಂಬಿದ ರೈತರು ಕಾರ್ಮಿಕರು ಭವಿಷ್ಯಕ್ಕೆ ತೊಂದರೆಯಾಗಲಿದೆ
ಬಸವರಾಜ ಶಿವಣ್ಣನವರ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT