ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರು ಅಧಿಕಾರಕ್ಕೆ ಅಂಟಿ ಕುಳಿತವರಲ್ಲ: ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆ
Last Updated 7 ಜೂನ್ 2021, 15:12 IST
ಅಕ್ಷರ ಗಾತ್ರ

ಹಾವೇರಿ: ‘ಹೈಕಮಾಂಡ್‌ ಸೂಚನೆ ನೀಡಿದರೆ ರಾಜೀನಾಮೆ ನೀಡುವೆ’ ಎಂದು ಬಿ.ಎಸ್‌. ಯಡಿಯೂರಪ್ಪನವರು ಹೇಳುವ ಮೂಲಕ ಒಳ್ಳೆಯ ಸಂದೇಶ ನೀಡಿದ್ದಾರೆ. ಇದು ಬಿಜೆಪಿಯ ವಿಶಿಷ್ಟತೆಯಾಗಿದ್ದು,ಕಾರ್ಯಕರ್ತನಿಂದ ನಾಯಕನವರೆಗೆ ಯಾರೂ ಅಧಿಕಾರಕ್ಕೆ ಅಂಟಿ ಕುಳಿತವರಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದರು.

ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಪಕ್ಷ ನೀಡುವ ಸೂಚನೆಯ ಆಧಾರದ ಮೇಲೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಅದೇ ಶಿಸ್ತು. ನಮ್ಮೆಲ್ಲ ಕಾರ್ಯಕರ್ತರಿಗೆ ಬಿಎಸ್‌ವೈ ಆದರ್ಶಪ್ರಾಯರಾಗಿದ್ದಾರೆ. ಪಕ್ಷದ ವರಿಷ್ಠರು ಸೂಚಿಸಿದರೆ ಸ್ಥಾನ ತೊರೆಯುತ್ತೇನೆ ಎಂದು ಅವರು ಹೇಳಿದ್ದರಲ್ಲಿ ತಪ್ಪೇನಿದೆ ಎಂದರು.

‘ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ನಮ್ಮೆಲ್ಲರ ಸರ್ವ ಸಮ್ಮತಿಯ ನಾಯಕ ಯಡಿಯೂರಪ್ಪನವರು. ಎರಡು ಕೋಟಿ ಜನರು ಆಶೀರ್ವಾದ ಮಾಡಿ, ಅವರಿಗೆ ಆ ಸ್ಥಾನ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಯೇ ಅಪ್ರಸ್ತುತ’ ಎಂದು ಹೇಳಿದರು.

ಪದೇ ಪದೇ ನಾಲಿಗೆ ಹರಿಬಿಡುವ ನಾಯಕರ ವಿರುದ್ಧ ಯಾವ ಕ್ರಮವನ್ನೂ ಜರುಗಿಸಿಲ್ಲವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಬಿಜೆಪಿ ಪ್ರಜಾಪ್ರಭುತ್ವ ಆಧಾರಿತ ಸಂಘಟನೆ. ನಮ್ಮಲ್ಲಿ ಶಿಸ್ತು ಸಮಿತಿ ಇದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಈಗಾಗಲೇ ಎಚ್ಚರಿಕೆಯ ನೋಟಿಸ್‌ ನೀಡಿದೆ. ಶಾಸಕ ತಪ್ಪು ಮಾಡಿದರೆ, ಮೂರು ಹಂತಗಳ ನೋಟಿಸ್‌ ನೀಡಬೇಕಾಗುತ್ತದೆ. ಮತ್ತೆ ತಪ್ಪು ಮಾಡಿದರೆ ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದರು.

‘ಕಾಂಗ್ರೆಸ್‌ ಟೀಕೆ ಮಾಡಲೆಂದೇ ಇರುವ ಪಕ್ಷ. ವಿರೋಧ ಮಾಡುವುದೇ ಅದರ ಕೆಲಸ. ದೇಶದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಕೋವಿಡ್‌ನಂಥ ಪರಿಸ್ಥಿತಿ ಇಲ್ಲದಿದ್ದರೂ ಬೆಲೆ ಏರಿಕೆ ತೀವ್ರವಾಗಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇರುವುದರಿಂದ ಕೋವಿಡ್‌ ಒಂದನೇ ಅಲೆ ಮತ್ತು ಎರಡನೇ ಅಲೆ ಬಂದರೂ ದೇಶದಲ್ಲಿ ಆರ್ಥಿಕ ಕುಸಿತವಾಗಿಲ್ಲ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT