ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಕಾಳು ಮೆಣಸು, ಕೈ ತುಂಬ ಕಾಸು

ಅಡಿಕೆಯೊಂದಿಗೆ ಮಿಶ್ರ ಬೆಳೆ ಬೆಳೆದ ರೈತ ಲಕ್ಷ್ಮಣ ಕೋಡಿಹಳ್ಳಿ
Last Updated 23 ಜೂನ್ 2022, 19:30 IST
ಅಕ್ಷರ ಗಾತ್ರ

ತಿಳವಳ್ಳಿ: ಹಾನಗಲ್‌ ತಾಲ್ಲೂಕಿನ ಗೊಂದಿ ಗ್ರಾಮದ ರೈತ ಲಕ್ಷ್ಮಣ ಕೋಡಿಹಳ್ಳಿಯವರು ಅಡಿಕೆ ಬೆಳೆಯೊಂದಿಗೆ ಮಿಶ್ರ ಬೆಳೆಯಾಗಿ ಉತ್ಕೃಷ್ಠ ಕಾಳು ಮೆಣಸನ್ನು ಬೆಳೆದು ಯಶಸ್ಸು ಕಂಡಿದ್ದಾರೆ.

ಕಾಳುಮೆಣಸು ಅಂಶಿಕ ನೆರಳಿನಲ್ಲಿ ಮತ್ತು ಆಸರೆಯನ್ನು ಬಯಸಿ ಬೆಳೆಯುವಂತಹ ಬೆಳೆಯಾಗಿದೆ. ಹೀಗಾಗಿ ಈ ಮೊದಲು ಗುಡ್ಡಗಾಡು ಪ್ರದೇಶದಲ್ಲಿ ಬೇರೆ ಮರಗಳ ಆಸರೆಯಾಗಿ ಈ ಬೆಳೆಯನ್ನು ಬೆಳೆಯುತ್ತಿದ್ದರು. ಅದೂ ಹೆಚ್ಚಾಗಿ ಅಡಿಕೆ ಮತ್ತು ತೆಂಗು ಬೆಳೆಗಳಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಲಕ್ಷ್ಮಣ ಕೋಡಿಹಳ್ಳಿ 2008ರಲ್ಲಿ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಶಿರಸಿಗೆ ಭೇಟಿ ಕೊಟ್ಟು ಅಲ್ಲಿಂದ ಬಿಡುಗಡೆಗೊಳಿಸಿರುವ ಅಡಿಕೆ ತಳಿಯಾದ ಎಸ್.ಎ.ಎಸ್-1 ತಳಿಯನ್ನು ಸುಮಾರು 3 ಎಕರೆಗೆ ಆಗುವಷ್ಟು ಖರೀದಿಸಿ ತಂದು ನಾಟಿ ಮಾಡಿ ಹೆಚ್ಚಿನ ಇಳುವರಿಯನ್ನು ಪಡೆದಿರುತ್ತಾರೆ.

ರೋಗಗಳಿಗೆ ಪರಿಹಾರ:ಮೂರು ವರ್ಷಗಳ ಹಿಂದೆ ಮತ್ತೊಮ್ಮೆ ಶಿರಸಿಯ ಸಂಶೋಧನಾ ಕೇಂದ್ರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ.ಲಕ್ಷ್ಮೀನಾರಾಯಣ ಹೆಗಡೆ ಅವರನ್ನು ಭೇಟಿ ಮಾಡಿ ತಮ್ಮ ಎಲ್ಲ ಅನುಭವವನ್ನು ಹಂಚಿಕೊಂಡು ಹಾಗೆಯೇ ಮತ್ತೆ ತಮ್ಮಲ್ಲಿರುವ ಸಮಸ್ಯೆಗಳಾದ ಹಿಡಿ ಮುಂಡಿಗೆ ರೋಗ, ಅಣಬೆ ರೋಗ ಹಾಗೂ ಅಡಿಕೆಗೆ ತಗಲುವ ಇನ್ನು ಅನೇಕ ರೋಗಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ.

ಇಲ್ಲಿ ಬೆಳೆಯುವ ಕಾಳು ಮೆಣಸಿನ ಬಳ್ಳಿಯನ್ನು ನೋಡಿ ಕಾಳು ಮೆಣಸು ಬೆಳೆಯುವ ತೀರ್ಮಾನಕ್ಕೆ ಬರುತ್ತಾರೆ. ಆಗ ಕೇಂದ್ರದ ಮುಖ್ಯಸ್ಥರಾದ ಡಾ.ಲಕ್ಷ್ಮೀನಾರಾಯಣ ಹೆಗಡೆಯವರು ಕಾಳುಮೆಣಸನ್ನು ನಿಮ್ಮಲ್ಲಿಯೂ ಸಹ ಬೆಳೆಯಬಹುದು. ಆದ್ರತೆ ಕನಿಷ್ಠ ಶೇ 60 ಇರುತ್ತದೆ. ಇದಕ್ಕೆ ಬೇಕಾದಂತಹ ನೆರಳು ಮತ್ತು ಆಸರೆಯೂ ಸಹ ನಿಮ್ಮಲ್ಲಿ ಇದೆ.

1500 ಸಸಿ ಖರೀದಿ:ಹೀಗಾಗಿ ನೀವು ವಾಣಿಜ್ಯ ಬೆಳೆಯಾಗಿ, ಅಡಿಕೆಯಲ್ಲಿ ಮಿಶ್ರ ಬೆಳೆಯಾಗಿ ಕಾಳು ಮೆಣಸು ಬೆಳೆಯಬಹುದು ಎಂದು ಹೇಳಿದಾಗ ರೈತ ಲಕ್ಷ್ಮಣ ಕೋಡಿಹಳ್ಳಿ 1500 ಸಸಿಗಳಿಗೆ ₹30,000ಗಳನ್ನು ಪಾವತಿಸಿ, ಖರೀದಿಸಿ 2017ರಲ್ಲಿ ತಂದು ನಾಟಿ ಮಾಡಿರುತ್ತಾರೆ ಮತ್ತು ಎರಡನೇ ವರ್ಷಕ್ಕೆ 1500 ಗಿಡಗಳಿಂದ ಸುಮಾರು 30 ಕೆಜಿಯಷ್ಟು ಕಾಳು ಮೆಣಸು ಕೊಯ್ಲು ಮಾಡಿ ಸಂಸ್ಕರಣೆ ಮಾಡಿರುತ್ತಾರೆ.

‘ಹೀಗೆ ಕಾಳು ಮೆಣಸು ಇಳುವರಿಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಕಾಳು ಮೆಣಸು 4 ಕ್ವಿಂಟಲ್ ನಷ್ಟು ಇಳುವರಿ ಬಂದಿದ್ದು, ಈ ಭಾರಿ 10 ಕ್ವಿಂಟಲ್ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಸಹೋದರರಾದ ಶಿವಾನಂದ ಕೋಡಿಹಳ್ಳಿ ಹಾಗೂ ರಾಮಪ್ಪ ಕೋಡಿಹಳ್ಳಿ.

ಇವರ ತೋಟ ಇತರೆ ರೈತರಿಗೆ ಒಂದು ಮಾದರಿಯಾಗಿದ್ದು ಇವರು ಜಿಲ್ಲೆಗೆ ಮಾದರಿ ಕೃಷಿಕರು ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT