ಬುಧವಾರ, ಜೂನ್ 29, 2022
25 °C
ಜಿಲ್ಲೆಗೆ ಶೇ 40ರಷ್ಟು ಹೊಸ ಪಠ್ಯಪುಸ್ತಕಗಳ ಪೂರೈಕೆ: ಹಳೆಯ ವಿದ್ಯಾರ್ಥಿಗಳ ಕೊಡುಗೆಗೆ ಮೆಚ್ಚುಗೆ

ಪಠ್ಯಪುಸ್ತಕಗಳ ಕೊರತೆ ನೀಗಿಸಿದ ‘ಬುಕ್‌ ಬ್ಯಾಂಕ್‌’

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮೇ 16ರಂದು ಶಾಲೆಗಳು ಪುನರಾರಂಭಗೊಂಡಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಆದರೆ, ಜಿಲ್ಲೆಗೆ ಶೇ 40ರಷ್ಟು ಹೊಸ ಪಠ್ಯಪುಸ್ತಕಗಳು ಮಾತ್ರ ಪೂರೈಕೆಯಾಗಿದ್ದು, ಇನ್ನೂ ಶೇ 60ರಷ್ಟು ಪಠ್ಯಪುಸ್ತಕಗಳು ಬರುವುದು ಬಾಕಿ ಇದೆ. 

ಹಾವೇರಿ ಜಿಲ್ಲೆಗೆ ಒಟ್ಟು 23,28,939 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, ಇದುವರೆಗೆ 9,19,296 ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ. ಕಾಗದದ ಕೊರತೆ ಮತ್ತು ಮುದ್ರಣ ವೆಚ್ಚದಲ್ಲಿ ಭಾರಿ ಏರಿಕೆಯಾದ ಕಾರಣ ಪಠ್ಯಪುಸ್ತಕಗಳ ಮುದ್ರಣ ಈ ಬಾರಿ ವಿಳಂಬವಾಗಿದೆ ಎನ್ನಲಾಗುತ್ತಿದೆ. 

ಹಿಂದಿನ ಎರಡು ವರ್ಷಗಳಲ್ಲೂ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಪಠ್ಯಪುಸ್ತಕಗಳ ಮುದ್ರಣ ತಡವಾಗಿತ್ತು. ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ‘ಬುಕ್‌ ಬ್ಯಾಂಕ್‌’ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. 

‘ಹಿಂದಿನ ವರ್ಷದ ಹಳೆಯ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ, ನೂತನ ವರ್ಷದ ವಿದ್ಯಾರ್ಥಿಗಳಿಗೆ ವಿತರಿಸುವುದು ‘ಬುಕ್‌ ಬ್ಯಾಂಕ್‌’ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 75 ಸಾವಿರ ಹಳೆಯ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹ ಕಾರ್ಯ ಇನ್ನೂ ಮುಂದುವರಿದಿದೆ’ ಎನ್ನುತ್ತಾರೆ ಪಠ್ಯಪುಸ್ತಕಗಳ ಜಿಲ್ಲಾ ನೋಡಲ್‌ ಅಧಿಕಾರಿ ಈರಪ್ಪ ಲಮಾಣಿ. 

‘ಹಿಂದಿನ ವರ್ಷಗಳಲ್ಲಿ ಶಾಲಾ ಹಂತದಲ್ಲಿ ಬುಕ್‌ಬ್ಯಾಂಕ್‌ಗಳನ್ನು ನಿರ್ವಹಿಸಿರುವಂತೆ, 2022–23ನೇ ಸಾಲಿನಲ್ಲಿಯೂ ಸಹ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ಹಂತದಲ್ಲಿ ಬುಕ್‌ ಬ್ಯಾಂಕ್‌ ಸಬಲೀಕರಣಗೊಳಿಸಬೇಕು. ಅಗತ್ಯ ಅನುಸಾರ ಬಳಕೆಗೆ ಕ್ರಮವಹಿಸಬೇಕು’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. 

‘1ರಿಂದ 9ನೇ ತರಗತಿವರೆಗಿನ ಮಕ್ಕಳಿಂದ ಹಳೆಯ ಪುಸ್ತಕಗಳನ್ನು ಪರೀಕ್ಷೆಯ ದಿನದಂದೇ ಸಂಗ್ರಹಿಸಿದ್ದೇವೆ. ಸಂಗ್ರಹಿಸಿದ ಪುಸ್ತಕಗಳನ್ನು ವಿಷಯವಾರು ವಿಂಗಡಿಸಿ, ಅವುಗಳನ್ನು ಶಾಲಾ ಹಂತದಲ್ಲಿಯೇ ನೂತನ ವರ್ಷದ ವಿದ್ಯಾರ್ಥಿಗಳಿಗೆ ಶಾಲೆಗೆ ಬಂದ ಮೊದಲ ದಿನದಿಂದಲೇ ಹಂಚಿಕೆ ಮಾಡಲಾಗುತ್ತಿದೆ’ ಎಂದು ಹಾವೇರಿ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪ್ರಭಾವತಿ ಕೊಪ್ಪದ ತಿಳಿಸಿದರು. 

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಹಾಲು ಹಾಗೂ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ದಾಖಲಾತಿಯೂ ಹೆಚ್ಚಳವಾಗುತ್ತಿದೆ. ಈ ವರ್ಷ ‘ಕಲಿಕಾ ಚೇತರಿಕೆ’ ಉಪಕ್ರಮದ ಮೂಲಕ ಮಕ್ಕಳಿಗೆ ಹೊಸ ಶೈಕ್ಷಣಿಕ ವರ್ಷದ ಬೋಧನೆಯನ್ನು ಆರಂಭಿಸಿದ್ದೇವೆ’ ಎನ್ನುತ್ತಾರೆ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ. ‌

***

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು