ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ವರ್ಷಕ್ಕೆ 500 ರೋಗಿಗಳು ಪತ್ತೆ: ಶೇ 40ರಷ್ಟು ಗುಟ್ಕಾ ವ್ಯಸನಿಗಳು

ಕ್ಯಾನ್ಸರ್ ಜಾಗೃತಿ: ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ನಾಳೆ
Published 25 ಜೂನ್ 2024, 14:38 IST
Last Updated 25 ಜೂನ್ 2024, 14:38 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 500 ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದು, ಇದರಲ್ಲಿ ಶೇ. 40ರಷ್ಟು ಮಂದಿ ತಂಬಾಕು ಹಾಗೂ ಗುಟ್ಕಾ ವ್ಯಸನಿಗಳು’ ಎಂದು ದಾವಣಗೆರೆ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯ ಡಾ. ಮಹಾಂತೇಶ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಯಾನ್ಸರ್ ಮೊದಲ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖವಾಗುತ್ತದೆ. ಹೀಗಾಗಿ, ಆರೋಗ್ಯದ ಬಗ್ಗೆ ಯಾವುದೇ ಸಂಶಯವಿದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಸ್ತನ, ಗರ್ಭಕೋಶ, ಗುದದ್ವಾರ, ಅನ್ನನಾಳ, ಬಾಯಿ, ಕುತ್ತಿಗೆ ಹಾಗೂ ಗಂಟಲು ಸೇರಿದಂತೆ ಹಲವು ಬಗೆಯ ಕ್ಯಾನ್ಸರ್‌ ಲಕ್ಷಣಗಳು ಕಾಣಿಸುತ್ತವೆ. ಕಿಮೋಥೆರಪಿ ಹಾಗೂ ರೇಡಿಯೊ ಥೆರಪಿ ಮೂಲಕ ರೋಗಕ್ಕೆ ಚಿಕಿತ್ಸೆ ನೀಡಬಹುದಾಗಿದೆ’ ಎಂದರು.

ಉಚಿತ ತಪಾಸಣೆ: ‘ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಹಾಗೂ ತಂಬಾಕು ಉತ್ಪನ್ನ–ಗುಟ್ಕಾ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಬರದಂತೆ ತಡೆಯಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜೂನ್ 27ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ವೈದ್ಯ ಮಹಾಂತೇಶ ತಿಳಿಸಿದರು.

‘ಬಾಯಿಯಲ್ಲಿ ಗುಳ್ಳೆ, ದೇಹದ ಮೇಲೆ ಗುಡ್ಡೆಗಳು ಸೇರಿದಂತೆ ಯಾವುದೇ ತರಹದ ಸಂಶಯಗಳು ಇರುವವರು ಶಿಬಿರಕ್ಕೆ ಬರಬಹುದು. ಆಧಾರ್ ಅಥವಾ ಬಿಪಿಎಲ್ ಕಾರ್ಡ್ ತರುವುದು ಕಡ್ಡಾಯ. ರೋಗದ ಲಕ್ಷಣ ಕಂಡುಬಂದರೆ, ಅಗತ್ಯ ಚಿಕಿತ್ಸೆ ನೀಡಲಾಗುವುದು. ಬಿಪಿಎಲ್, ಎಪಿಎಲ್, ಇಎಸ್‌ಐ, ಯಶಸ್ವಿನಿ, ಆಯುಷ್ಮಾನ್ ಭಾರತ್ ಹಾಗೂ ಇತರೆ ಕಾರ್ಡ್‌ ಇದ್ದವರಿಗೆ ಸರ್ಕಾರದ ನಿಯಮಗಳ ಅನುಸಾರ ಸೇವೆ ಲಭ್ಯವಿದೆ’ ಎಂದು ಹೇಳಿದರು.

ಆಸ್ಪತ್ರೆಯ ಆಡಳಿತ ಅಧಿಕಾರಿ ಡಿ. ರಾಘವೇಂದ್ರ, ಜಿ.ಆರ್. ಸಂತೋಷ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT