ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು | ಬೆಳಗದ ದೀಪ, ಕಣ್ಮುಚ್ಚಿದ ಸಿಸಿ ಟಿವಿ ಕ್ಯಾಮೆರಾ!

Published 28 ಆಗಸ್ಟ್ 2023, 3:17 IST
Last Updated 28 ಆಗಸ್ಟ್ 2023, 3:17 IST
ಅಕ್ಷರ ಗಾತ್ರ

ಗಣೇಶಗೌಡ ಎಂ ಪಾಟೀಲ

ಸವಣೂರು: ಪಟ್ಟಣದ ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತ, ರಸ್ತೆಗಳಲ್ಲಿ ನಿಗಾವಹಿಸಲು ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾಗಳು ಕಣ್ಮುಚ್ಚಿದ್ದು, ಪುರಸಭೆ ಮತ್ತು ಪೊಲೀಸ್‌ ಇಲಾಖೆಯ ನಿರ್ವಹಣೆ ಇಲ್ಲದೆ ನಿಷ್ಕ್ರಿಯಗೊಂಡಿವೆ.

ಕಿಡಿಗೇಡಿಗಳು, ಪುಂಡು ಪೋಕರಿಗಳ ಚಲನವಲನಗಳನ್ನು ಸುಲಭವಾಗಿ ಪತ್ತೆಹಚ್ಚಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ. ಪೊಲೀಸ್ ಇಲಾಖೆಯ ಒತ್ತಾಸೆಯ ಮೇರೆಗೆ ಪುರಸಭೆ ಹಿಂದಿನ ಆಡಳಿತ ಮಂಡಳಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಅವೆಲ್ಲವೂ ನಿಂತು ಹೋಗಿವೆ. ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದರೂ ಇಲ್ಲದಂತಾಗಿದೆ.

2009-10ರಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ₹15 ಲಕ್ಷ ವೆಚ್ಚದಲ್ಲಿ ಪಟ್ಟಣದ ಸಿಂಪಿಗಲ್ಲಿ ವೃತ್ತ, ದರ್ಗಾ ಕ್ರಾಸ್, ಚಾವಡಿ ವೃತ್ತ, ಭರಮಲಿಂಗೇಶ್ವರ ವೃತ್ತ, ಸಂತೆ ಪೇಟೆ, ಬಸ್ ನಿಲ್ದಾಣ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ, ಹಳೇ ಕೋರ್ಟ್‌ ವೃತ್ತಗಳಲ್ಲಿ ಒಟ್ಟು 16 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಮತ್ತು ನಿರ್ವಹಣೆಯ ಹೊಣೆ ಸ್ಥಳೀಯ ಠಾಣೆಗೆ ನೀಡಲಾಗಿತ್ತು. ಪಟ್ಟಣದ 8 ಸ್ಥಳಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳ ಮೂಲಕ ಅಪರಾಧ ಕೃತ್ಯ, ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಕಣ್ಗಾವಲು ವ್ಯವಸ್ಥೆ ನೆರವಾಗಿತ್ತು.

ಜೇಬುಗಳ್ಳರ ಹಾವಳಿ

ಆದರೆ, ಈ ಎಲ್ಲ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿರುವುದರಿಂದ ಪಟ್ಟಣದಲ್ಲಿ ಶುಕ್ರವಾರದ ಸಂತೆ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಜೇಬು ಕಳ್ಳರು ಹಾಗೂ ಮೊಬೈಲ್‌ ಕಳ್ಳರು ಅವ್ಯಾಹತವಾಗಿ ಕೈಚಳಕ ತೋರುತ್ತಿದ್ದಾರೆ. ಗುಂಪು ಘರ್ಷಣೆ, ಸಂಘರ್ಷ, ಪುಂಡು ಪೋಕರಿಗಳ ಕೀಟಲೆಗಳಿಗೆ ಮೂಗುದಾರ ಹಾಕಲು ಪುರಾವೆ ಸಿಗುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ಕಿರಿಕಿರಿ ಉಂಟಾಗುತ್ತದೆ. 

ಬೆಳಗದ ವಿದ್ಯುತ್‌ ದೀಪ

ಸಮರ್ಪಕವಾಗಿ ಬೆಳಗದ ವಿದ್ಯುತ್ ದೀಪ, ಸ್ವಚ್ಛತೆ ಕಾಣದ ಚರಂಡಿ, ಅಭಿವೃದ್ಧಿಯನ್ನು ಕಾಣದ ರಸ್ತೆಗಳಿಂದ ಕೂಡಿದ ಸವಣೂರಿನಲ್ಲಿ ಜನತೆ ಸಮಸ್ಯೆಗಳ ನಡುವೆಯೇ ಜೀವನ ಮಾಡುವಂತಾಗಿದೆ. ರಾತ್ರಿ ವೇಳೆ ಸಮರ್ಪಕವಾದ ಬೀದಿದೀಪ ವ್ಯವಸ್ಥೆಯಿಲ್ಲದ ಕಾರಣ ಸಾರ್ವಜನಿಕರು ಸಂಚರಿಸಲು ಭಯಪಡುವಂತಾಗಿದೆ. ಕಳ್ಳಕಾಕರ ಭಯ ಒಂದುಕಡೆಯಾದರೆ, ಮತ್ತೊಂದು ಕಡೆ ವಿಷಜಂತುಗಳ ಕಾಟ ಮತ್ತೊಂದು ಕಡೆ. 

ತುಂಬಿ ತುಳುಕುತ್ತಿರುವ ಚರಂಡಿ

ಪಟ್ಟಣದ ಮುಖ್ಯ ಮಾರುಕಟ್ಟೆ, ಕದರಬಾಗ ಓಣಿ, ಸಮಗಾರ ಓಣಿ, ಕಮಾಲಬಂಗಡಿ ಓಣಿ, ಶುಕ್ರವಾರ ಪೇಟೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ರಸ್ತೆ, ಧರ್ಮರಾಜ ನಗರ ಸೇರಿದಂತೆ ಪಟ್ಟಣದ ವಿವಿಧ ಭಾಗಗಳಲ್ಲಿನ ಚರಂಡಿಗಳು ತುಂಬಿಕೊಂಡು ನಿಂತು ಮಳೆ ಬಂದ ಸಂದರ್ಭದಲ್ಲಿ ರಸ್ತೆಯ ಮೇಲೆ ತ್ಯಾಜ್ಯ ಬಂದು ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದೆ.

ಅಷ್ಟೇ ಅಲ್ಲದೆ, ಸಮಗಾರ ಓಣಿ ಹಾಗೂ ಕೋರಿಪೇಟೆಯಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದ ರಸ್ತೆಯ ಕೆಳಭಾಗದಲ್ಲಿರುವ ಮನೆಗಳಿಗೆ ಮಳೆ ಬಂದಾಗ ಚರಂಡಿ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆಗೆ ಸಿಲುಕುವಂತಾಗಿದೆ. 

‘ಪಟ್ಟಣದಲ್ಲಿರುವ ರಾಜಕಾಲುವೆ ಹಾಗೂ ಚರಂಡಿಗಳನ್ನು ತಳಮಟ್ಟದಿಂದ ಸ್ವಚ್ಛಗೊಳಿಸಿ ನೀರು ಸರಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಹಲವಾರು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿಲ್ಲ. ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸಾರ್ವಜನಿಕರು ಜೀವನ ನಡೆಸುತ್ತಿದ್ದಾರೆ‘ ಎಂದು ಸ್ಥಳೀಯ ನಿವಾಸಿ ಬಾಹುದ್ದೀನ ಇನಾಮದಾರ ಪುರಸಭೆ ವಿರುದ್ಧ ಹರಿಹಾಯ್ದರು. 

ಸಿಸಿಟಿವಿ ಕ್ಯಾಮೆರಾ ಅಗತ್ಯವಿರುವ ಸ್ಥಳಗಳು

ಸವಣೂರು ಪಟ್ಟಣಕ್ಕೆ ಬಂದು ಹೋಗುವ ಎಲ್ಲ ಜನರ ಚಲನವನಗಳ ಮೇಲೆ ನಿಗಾವಹಿಸಲು ಗೋಕಾಕ್‌ ಸರ್ಕಲ್ ಕಾರಡಗಿ ಕ್ರಾಸ್ ಮೋತಿ ತಲಾಬ್‌ ಕ್ರಾಸ್ ಹುರಳಿಕುಪ್ಪಿ ಕ್ರಾಸ್ ಬಂಕಾಪುರ ಕ್ರಾಸ್ ಚಳ್ಳಾಳ ಮಾಹೂರ ಕ್ರಾಸ್ ಸಿಂಪಿಗಲ್ಲಿ ಕ್ರಾಸ್ ಎಸ್‌ಬಿಐ ವೃತ್ತ ಚಾವಡಿ ಕ್ರಾಸ್ ಭರಮಲಿಂಗೇಶ್ವರ ಸರ್ಕಲ್ ಶುಕ್ರವಾರ ಪೇಟೆ ಬಸ್ ನಿಲ್ದಾಣ ರಸ್ತೆ ಡಾ.ಬಿ.ಆರ್.ಅಂಬೇಡ್ಕರ್‌ ಸರ್ಕಲ್ ಹಳೇ ಕೋರ್ಟ್‌ ಸರ್ಕಲ್ ಸಾರ್ವಜನಿಕ ಆಸ್ಪತ್ರೆ ಸರ್ಕಲ್ ಸಿಂಪಿಗಲ್ ಗಣೇಶ ದೇವಸ್ಥಾನ ಸರ್ಕಲ್ ಮಜೀದ್ ಕಾಲೇಜು ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವುದರಿಂದ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಮತ. 

ಜನ ಏನಂತಾರೆ..?

ಸವಣೂರು ಪಟ್ಟಣದಲ್ಲಿ ಶುಕ್ರವಾರ ನಡೆಯುವ ವಾರದ ಸಂತೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಗ್ರಾಮೀಣ ಪ್ರದೇಶದ ಜನರು ಹಣವನ್ನು ಕಳೆದುಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಪುರಸಭೆ ಹಾಗೂ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾಗಳ ದುರಸ್ತಿಗೆ ಮುಂದಾಗಬೇಕು – ರಮೇಶ ಅರಗೋಳ ಪ್ರಗತಿಪರ ರೈತಮಂತ್ರೋಡಿ ಗ್ರಾಮ

ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ 32 ಸ್ಥಳಗಳನ್ನು ಗುರುತಿಸಿ 64 ಕ್ಯಾಮೆರಾಗಳನ್ನು ಅಳವಡಿಸಲು ಪುರಸಭೆ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮ ಕೈಗೊಳ್ಳಲಾಗಿದೆ – ಆನಂದ ಒಣಕುದ್ರೆ ಸಿಪಿಐ ಸವಣೂರು ಪೋಲಿಸ್ ಠಾಣೆ.

ತ್ಯಾಜ್ಯ ವಿಲೇವಾರಿಗೆ ವಾಹನಗಳ ದುರಸ್ತಿ ಇರುವುದರಿಂದ ಹೊಸ ವಾಹನ ಖರೀದಿಗೆ ಅನುಮೋದನೆ ಪಡೆಯಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅವಳಡಿಸಲು ಟೆಂಡರ್ ಕರೆಯಲಾಗಿದ್ದು 15 ದಿನಗಳಲ್ಲಿ ಅಳವಡಿಕೆ ಪ್ರಕ್ರಿಯೆ ಕೈಗೊಂಡು ಶಾಂತಿ ಸುವ್ಯವಸ್ಥೆಗೆ ಸಹಕಾರ ನೀಡಲಾಗುವುದು – ರೇಣುಕಾ ದೇಸಾಯಿ ಮುಖ್ಯಾಧಿಕಾರಿಸವಣೂರು ಪುರಸಭೆ 

ಸವಣೂರಿನ ಮುಖ್ಯರಸ್ತೆಗೆ ಅಳವಡಿಸಿರುವ ಕೆಲವು ಬೀದಿ ದೀಪಗಳು ಬೆಳಗದೆ ನಿಷ್ಕ್ರಿಯಗೊಂಡಿವೆ 
ಸವಣೂರಿನ ಮುಖ್ಯರಸ್ತೆಗೆ ಅಳವಡಿಸಿರುವ ಕೆಲವು ಬೀದಿ ದೀಪಗಳು ಬೆಳಗದೆ ನಿಷ್ಕ್ರಿಯಗೊಂಡಿವೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT