ಶುಕ್ರವಾರ, ಜೂನ್ 18, 2021
24 °C
ಕೋವಿಡ್‌ ಎರಡನೇ ಅಲೆ ಆತಂಕ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ನಿಯಮ ಪಾಲಿಸಿ ಹೋಳಿ ಆಚರಿಸಿ: ಸಂಜಯ ಶೆಟ್ಟೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್-19 ಎರಡನೇ ಅಲೆಯ ಕಾರಣ ಜಿಲ್ಲೆಯಲ್ಲಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಇದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಅಂತರ ಕಾಯ್ದುಕೊಂಡು ಅತ್ಯಂತ ಸರಳವಾಗಿ ಹೋಳಿ, ಯುಗಾದಿ, ಶಬ್-ಎ-ಬರಾತ್ ಹಾಗೂ ಗುಡ್ ಫ್ರೈಡೆ ಹಬ್ಬಗಳನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿಕೊಂಡರು.

ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ಯುಗಾದಿ, ಶಬ್-ಎ-ಬರಾತ್ ಹಾಗೂ ಗುಡ್ ಫ್ರೈಡೆ ಹಬ್ಬಗಳ ಹಿನ್ನೆಲೆಯಲ್ಲಿ ಕರೆಯಲಾದ ಜಿಲ್ಲಾ ಮಟ್ಟದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಹೋಳಿ, ಹಿರಿಯರ ಹಬ್ಬ, ಯುಗಾದಿ ಸೇರಿದಂತೆ ಯಾವುದೇ ಸಾಂಪ್ರದಾಯಿಕ ಹಬ್ಬಗಳ ಆಚರಣೆಗೆ ನಿರ್ಭಂಧವಿಲ್ಲ. ಆದರೆ ಸಾರ್ವಜನಿಕವಾಗಿ ಗುಂಪುಗೂಡದೆ ಕೋವಿಡ್ ನಿಯಮ ಪಾಲಿಸಿ ಮನೆಯಲ್ಲಿಯೇ ಸುರಕ್ಷತೆ, ಸಂತೋಷ ಹಾಗೂ ಸಾಂಪ್ರದಾಯಿಕವಾಗಿ ಸರಳ ಆಚರಣೆ ಮಾಡಿ ಎಂದು ಸಲಹೆ ನೀಡಿದರು.

ಹೆಚ್ಚುತ್ತಿರುವ ಕೊರೊನಾ:

ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಶುಕ್ರವಾರ ಐವರಿಗೆ ಕೋವಿಡ್ ಪಾಜಿಟಿವ್ ಕಂಡುಬಂದಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಇದೇ ಪರಿಸ್ಥಿತಿ ಇತ್ತು. ಆರಂಭದಲ್ಲಿ ಕಡಿಮೆ ಪ್ರಕರಣಗಳು ಕಂಡು ಬಂದು 200, 300 ಪಾಜಿಟಿವ್ ಪ್ರಕರಣಗಳು ಕಂಡುಬಂದವು ಎಂದರು. 

ಲಸಿಕೆಗೆ ಹಿಂದೇಟು:

ಕೋವಿಡ್ ಲಸಿಕೆ ಬಂದರೂ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆ ಇದ್ದು, ಈವರೆಗೆ 50 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ 20 ಸಾವಿರ ಜನ ಸರ್ಕಾರಿ ಅಧಿಕಾರಿ ಹಾಗೂ ನೌಕರರಿದ್ದಾರೆ. ಮೊದಲ ಡೋಸ್ ಪಡೆದ ಕೆಲವರು ಎರಡನೇ ಡೋಸ್ ಪಡೆಯುವುದು ಬಾಕಿ ಇದೆ ಎಂದರು. 

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಂತರ ಕಾಯ್ದುಕೊಂಡು ಹಬ್ಬ ಆಚರಿಸೋಣ, ಬಂಡಿ ಉತ್ಸವ, ಡಿಜೆ ಬಳಕೆ, ಮೆರವಣಿಗೆ, ರ‍್ಯಾಲಿ ನಡೆಸಿ ಗುಂಪು ಗೂಡದೇ ಸಾರ್ವಜನಿಕವಾಗಿ ಆಚರಿಸುವುದು ಬೇಡ. ಪೊಲೀಸರೊಂದಿಗೆ ಎಲ್ಲರೂ ಸಹಕರಿಸಿ, ನಿಯಮ ಉಲ್ಲಂಘಿಸಿದರೆ ಕ್ರಮ ಅನಿವಾರ್ಯ ಎಂದರು. 

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ಹೋಳಿ ಹಬ್ಬ ರಾಜ್ಯದಲ್ಲೇ ಬಾಗಲಕೋಟೆ ಹೊರತುಪಡಿಸಿದರೆ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯ ಮರೆಯದೇ ಸುರಕ್ಷತೆ ದೃಷ್ಟಿಯಿಂದ ಸರಳವಾಗಿ ಆಚರಿಸೋಣ’ ಎಂದರು. 

ಸಭೆಯಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವರಾಜ ಗದ್ದಿನಮಠ, ರಿಯಾಜ್ ಅಹ್ಮದ್, ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ ಪೂಜಾರಿ, ಪ್ರಕಾಶ ಮಣಿಗಾರ, ಪ್ರಭು ಹಿಟ್ನಳ್ಳಿ, ಪ್ರಭುಸ್ವಾಮಿ ಕರ್ಜಗಿಮಠ, ಬಸವರಾಜ ಪೂಜಾರ, ರಮೇಶ ಆನವಟ್ಟಿ, ಅಬ್ದುಲ್ ಖಾದರ್, ಐ.ಯು.ಪಠಾಣ ಇತರರು ಸಭೆಯಲ್ಲಿ ಮಾತನಾಡಿದರು.

ಡಿವೈಎಸ್ಪಿ ವಿಜಯಕುಮಾರ ಸಂತೋಷ ಸ್ವಾಗತಿಸಿದರು. ರಾಣೆಬೆನ್ನೂರ ಡಿವೈಎಸ್ಪಿ ಟಿ.ಸುರೇಶ ವಂದಿಸಿದರು. ಸರ್ಕಾರಿ ಕಾಮಣ್ಣ ಪ್ರತಿಷ್ಠಾನದ ಮುಖ್ಯಸ್ಥ ರಾಕೇಶ್‍ಗೌಡ ಪೊಲೀಸ್‍ ಪಾಟೀಲ ಇದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು