ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಕ್ಕೆ ನೀರು ನುಗ್ಗುವುದನ್ನು ತಪ್ಪಿಸಿ: ರೈತರ ಮನವಿ

ಕೇಂದ್ರ ನೆರೆ ಪರಿಹಾರ ತಂಡದಿಂದ ಹಾನಿ ಪ್ರದೇಶಗಳಿಗೆ ಭೇಟಿ: ರೈತರಿಂದ ಮಾಹಿತಿ ಸಂಗ್ರಹ
Last Updated 5 ಸೆಪ್ಟೆಂಬರ್ 2021, 14:44 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ನೆರೆ ಅಧ್ಯಯನ ತಂಡ ಭಾನುವಾರ ಹಾವೇರಿ ಜಿಲ್ಲೆಯ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವಾಂಶ ಕುರಿತಂತೆ ಪರಿಶೀಲನೆ ನಡೆಸಿತು.

ಭಾರತ ಸರ್ಕಾರದ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯದ ಮುಖ್ಯ ಎಂಜಿನಿಯರ್‌ ಎಸ್.ವಿ. ಜಯಕುಮಾರ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ ಅಧ್ಯಯನ ತಂಡ ಜಿಲ್ಲೆಯ ಎಂಟು ತಾಲ್ಲೂಕುಗಳ ಆಯ್ದ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ರೈತರ ಮನವಿ

ಮುನವಳ್ಳಿ, ಕೂಡಲ, ನಾಗನೂರ ಹಾಗೂ ಮನ್ನಂಗಿ ಗ್ರಾಮದಲ್ಲಿ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಿದ ರೈತರು, ತ್ವರಿತವಾಗಿ ಪರಿಹಾರ ಬಿಡುಗಡೆಗೆ ಬೇಡಿಕೆ ಸಲ್ಲಿಸಿದರು. ಕಳೆದ ಮೂರು ವರ್ಷಗಳಿಂದ ಸತತವಾಗಿ ಅತಿವೃಷ್ಟಿಯಿಂದ ಬೆಳೆಹಾನಿಯಾಗುತ್ತಿದೆ. ರೈತರು ತೀವ್ರ ಸಂಕಷ್ಟದಲ್ಲಿರುವಾಗಿ ತಿಳಿಸಿದರು.

ಮುನವಳ್ಳಿ ಜಮೀನುಗಳಿಗೆ ಚಂದಾಪುರ ಸೇರಿದಂತೆ ಮೇಲಿನ 15 ಕೆರೆಗಳ ನೀರು ತುಂಬಿ ಹಳ್ಳದ ಮೂಲಕ ಹರಿದು ರೈತರ ಬೆಳೆಗೆ ನುಗ್ಗುತ್ತದೆ. ಇದು ಪ್ರತಿ ವರ್ಷ ಪುನರಾವರ್ತನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹಳ್ಳವನ್ನು ಅಗಲೀಕರಣಗೊಳಿಸಬೇಕು. ಆ ಮೂಲಕ ರೈತರು ನಷ್ಟ ಅನುಭವಿಸುವುದುನ್ನು ತಪ್ಪಿಸುವಂತೆ ಈ ಭಾಗದ ರೈತರು ಮನವಿ ಮಾಡಿಕೊಂಡರು.

ಕೂಡಲ ಮತ್ತು ನಾಗನೂರ ಭಾಗದ ರೈತರು ಕೇಂದ್ರ ತಂಡಕ್ಕೆ ಮನವಿ ಮಾಡಿಕೊಂಡು ವರದಾ ನದಿಯಿಂದ ರೈತರ ಹೊಲಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ನದಿಗೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿಕೊಂಡರು.

₹38 ಕೋಟಿ ಪರಿಹಾರಕ್ಕೆ ಬೇಡಿಕೆ:

ಹಾನಿ ಪ್ರದೇಶಕ್ಕೆ ಭೇಟಿಯ ಮುನ್ನ ಕೇಂದ್ರ ತಂಡ ಶಿಗ್ಗಾವಿ ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಜಿಲ್ಲೆಯ ಅಧಿಕಾರಿಗಳಿಂದ ಹಾನಿಯ ಕುರಿತಂತೆ ಮಾಹಿತಿ ಪಡೆದುಕೊಂಡಿತು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಕೇಂದ್ರ ತಂಡಕ್ಕೆ ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರಸೆಂಟೇಶನ್‌ ಮೂಲಕ ಮನವರಿಕೆ ಮಾಡಿಕೊಟ್ಟರು. ಜುಲೈ ತಿಂಗಳಲ್ಲಿ ವಿಶೇಷವಾಗಿ 23ರಿಂದ 25ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆಹಾನಿ, ಬೆಳೆಹಾನಿ ಹಾಗೂ ಮೂಲಸೌಕರ್ಯಗಳ ಹಾನಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ₹38 ಕೋಟಿ ಪರಿಹಾರದ ಬೇಡಿಕೆಯನ್ನು ಸಲ್ಲಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಗೆ ₹8.97 ಕೋಟಿ ಪರಿಹಾರ ಅಗತ್ಯವಾಗಿದೆ. ರಸ್ತೆ, ಸೇತುವೆ, ಕಟ್ಟಡ, ಕುಡಿಯುವ ನೀರಿನ ಸಂಪರ್ಕ ಹಾನಿ ಒಳಗೊಂಡಂತೆ ₹28.96 ಕೋಟಿ ಪರಿಹಾರದ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

ಪ್ರವಾಹದ ಸಂದರ್ಭದಲ್ಲಿ ಮೂರು ಜಾನುವಾರುಗಳು ಹಾನಿಯಾಗಿದೆ. ಪರಿಹಾರ ವಿತರಿಸಲಾಗಿದೆ. 24 ಕಾಳಜಿ ಕೇಂದ್ರಗಳನ್ನು ತೆರೆದು 7065 ಜನರಿಗೆ ಪರಿಹಾರ ಒದಗಿಸಲಾಗಿದೆ. 710 ಜನರಿಗೆ ತಲಾ 10 ಸಾವಿರದಂತೆ ತಾತ್ಕಾಲಿಕ ಪರಿಹಾರ ಹಣ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸತೀಶ್ ಜಾಗೀರದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT