ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ: ಬೇಸಿಗೆ ರಜೆ ಕಳೆದು ಶಾಲೆಗೆ ನಡೆದ ಚಿಣ್ಣರು

ಶಾಲಾ ಪ್ರಾರಂಭೊತ್ಸವ: ಹಬ್ಬದ ವಾತಾವರಣ
Published 31 ಮೇ 2024, 13:52 IST
Last Updated 31 ಮೇ 2024, 13:52 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಹುಲಗೂರ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆ ಪ್ರಾರಂಭೋತ್ಸವದ ಅಂಗವಾಗಿ ಶುಕ್ರವಾರ ಮಕ್ಕಳಿಗೆ ಸಿಹಿ, ಗುಲಾಬಿ ಹೂಗಳನ್ನು ನೀಡಿ ಆರತಿ ಬೆಳಗುವ ಮೂಲಕ ಶಿಕ್ಷಕರು ಸ್ವಾಗತಿಸಿದರು. ಹೀಗಾಗಿ ಇಡೀ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.

ಕಳೆದ ಎರಡು ತಿಂಗಳಿಂದ ಬೇಸಿಗೆ ರಜೆ ಕಳೆದು ಮಕ್ಕಳು ಶಾಲೆ ಕಡೆ ನಡೆದಿರುವುದು ಪಾಲಕ, ಪೋಷಕರಲ್ಲಿ ಹರ್ಷ ಮೋಡಿಸಿದೆ. ಹಳೆಯದನ್ನು ಕಳೆದು ಹೊಸತನವನ್ನು ಮೈಗೊಡಿಸುವ ಚಿಂತನೆ, ಹೊಸ, ಹೊಸ ಭಾವನೆಗಳನ್ನು ಕಟ್ಟಿಕೊಂಡು ಹರ್ಷ ಚಿತ್ತರಾಗಿ ಲಘು–ಬಗೆಯಿಂದ ಶಾಲೆಗೆ ಬರುವ ಮಕ್ಕಳಿಗೆ ಶಾಲಾ ಶಿಕ್ಷಕರು, ಸಿಬ್ಬಂದಿ ಸಿಹಿ ಹಂಚಿ, ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.

ಶಾಲಾ ಆರಂಭೋತ್ಸವಕ್ಕಾಗಿ ಶಿಕ್ಷಕರು, ಸಿಬ್ಬಂದಿ ಕಳೆದ ಎರಡು ದಿನಗಳಿಂದ ಶಾಲೆ ಗೋಡೆಗಳನ್ನು, ಮೈದಾನವನ್ನು, ನೀರಿನ ಟ್ಯಾಂಕರ್ ಮತ್ತು ಕೊಠಡಿಗಳನ್ನು ಸ್ವಚ್ಛ ಮಾಡುವ ಮೂಲಕ ಕಂಗೊಳಿಸುವಂತೆ ಮಾಡಿದ್ದಾರೆ. ಶಾಲಾ ಮೈದಾನದಲ್ಲಿ ಬಣ್ಣ , ಬಣ್ಣದ ರಂಗೋಲಿಗಳನ್ನು ಹಾಕಿ, ಶಾಲೆ ಮುಖ್ಯ ದ್ವಾರಕ್ಕೆ ತೆಂಗು, ಮಾವಿನ ತಳಿರು ತೋರಣಗಳನ್ನು ಹಾಕಿ ಅಲಂಕರಿಸಿದ್ದರು. ಅದರಿಂದ ಚಿಣ್ಣರ ಸಂಭ್ರಮ ತಡೆಯುವಂತಿಲ್ಲ. ಎರಡು ತಿಂಗಳು ಅಗಲಿದ ಸ್ನೇಹಿತರ, ಗುರುಗಳನ್ನು ಕಂಡು ಭಾವುಕರಾದರು. ಹಸ್ತಲಾಘವ ಮಾಡುವುದು, ಹೊಸ ತರಗತಿಗಳ ಬಗ್ಗೆ, ಹೊಸ ವಿಷಯಗಳ ಬಗ್ಗೆ ಹಾಗೂ ಹೊಸದಾಗಿ ಬಂದಿರುವ ಶಿಕ್ಷಕರ ಬಗ್ಗೆ ಮಾತನಾಡುವ ಮೂಲಕ ಹರ್ಷ ಚಿತ್ತರಾಗಿ ನಲೆದಾಡುವ ದೃಶ್ಯಗಳು ಕಂಡು ಬಂದವು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ ಮಾತನಾಡಿ, ‘ಸಡಗರ, ಸಂಭ್ರಮದಿಂದ ಶಾಲಾ ಪ್ರಾರಂಭೊತ್ಸವವನ್ನು ನಡೆಸುವ ಮೂಲಕ ಮಕ್ಕಳ ಮನಸ್ಸನ್ನು ಅರಳಿಸುವ ಕಾರ್ಯ ಮಾಡಲಾಗಿದೆ. ಎರಡು ತಿಂಗಳು ಶಾಲೆಯಿಂದ ದೂರವಾದ ಮಕ್ಕಳಿಗೆ ಶಾಲಾ ವಾತಾವರಣ ಮತ್ತೆ ಹಬ್ಬದಂತೆ ಕಾಣಬೇಕು. ಶಾಲೆ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ಅಲಂಕರಿಸಲಾಗಿದೆ’ ಎಂದರು.

‘ಮಕ್ಕಳಿಗೆ ಹೊಸ ಬಟ್ಟೆ, ಹೊಸ ತರಗತಿಗಳ ಪುಸ್ತಕ, ಆಯಾ ತರಗತಿಗಳ ಶಿಕ್ಷಕರ ಪರಿಚಯ ಮಾಡಲಾಯಿತು. ಇವುಗಳ ಮೂಲಕ ಮಕ್ಕಳಲ್ಲಿ ಹೊಸ ಚೈತನ್ಯ ಮೋಡಿಸಿ ಕಲಿಕೆಯತ್ತ ಸಾಗಿಸಲಾಗಿದೆ. ಅದರಿಂದ  ಕಲಿಕೆಗೆ ಉತ್ತೇಜನ ನೀಡಿದಂತಾಗಿದೆ’ ಎಂದರು.

ಮುಖ್ಯ ಶಿಕ್ಷಕಿ ವಿದ್ಯಾ ಸವಣೂರ ಅಧ್ಯಕ್ಷತೆ ವಹಿಸಿದ್ದರು. ಸಂಗೀತಾ ಅಕ್ಕಿಮರಡಿ, ಸರೋಜಾ ಬಾಲೆಹೊಸೂರ, ಅನುಷಾ ಬಾರಕೇರ, ಶಿಲ್ಪಾ ಚಲವಾದಿ ಹಾಗೂ ಅಡುಗೆ ಸಹಾಯಕರ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT