ಶುಕ್ರವಾರ, ಜನವರಿ 22, 2021
19 °C
ಪ್ರಮಾಣ ವಚನಕ್ಕೆ ಬಂದಿದ್ದ ಸದಸ್ಯರಿಗೆ ನಿರಾಸೆ: ಪ್ರಾದೇಶಿಕ ಆಯುಕ್ತರಿಗೆ ದೂರು

ಪೌರಾಯುಕ್ತರ ಗೈರು: ಸಾಮಾನ್ಯ ಸಭೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರಸಭೆಯ ನೂತನ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆ ಕರೆದಿದ್ದ ಪೌರಾಯುಕ್ತರೇ, ಗೈರು ಹಾಜರಾದ ಕಾರಣ ಮಂಗಳವಾರದ ಸಭೆ ರದ್ದಾಯಿತು. ಪ್ರಮಾಣ ವಚನ ಸ್ವೀಕರಿಸಲು ಬಂದಿದ್ದ ನೂತನ ಸದಸ್ಯರು ಬೇಸರ ವ್ಯಕ್ತಪಡಿಸಿದರು. 

ಎರಡೂವರೆ ವರ್ಷಗಳಿಂದ ನಗರಸಭೆಗೆ ಆಡಳಿತ ಮಂಡಳಿ ಇರಲಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ ಮಾಡಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅ.31ರಂದು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 

ನ.24ರಂದು ನಗರಸಭೆಯ ಸಾಮಾನ್ಯ ಸಭೆಯನ್ನು ನಿಗದಿಗೊಳಿಸಿದ ಪೌರಾಯುಕ್ತ ಪರಶುರಾಮ ಚಲವಾದಿ ಅವರು ಸದಸ್ಯರಿಗೆ ನ.17ರಂದು ‘ಸಾಮಾನ್ಯ ಸಭೆ ಸೂಚನಾ ಪತ್ರ’ ಕಳುಹಿಸಿದ್ದರು. ಹೀಗಾಗಿ ನಗರಸಭೆಯ ಸಾಮಾನ್ಯ ಸಭೆಗೆ ಬೆಳಿಗ್ಗೆ 11ಕ್ಕೆ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಸೇರಿ ಒಟ್ಟು 21 ಸದಸ್ಯರು ಹಾಜರಾಗಿದ್ದರು. ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉಪಾಧ್ಯಕ್ಷೆ ಜಹಿರಾಬಿ ಜಮಾದಾರ ಕೂಡ ಪಾಲ್ಗೊಂಡಿದ್ದರು.

ಸಭೆ ಆರಂಭವಾಗಬೇಕು ಎನ್ನುವ ವೇಳೆಗೆ ಪೌರಾಯುಕ್ತರು ಮೊಬೈಲ್‌ನಲ್ಲಿ ಮಾತನಾಡುತ್ತಾ ಹೊರನಡೆದರು. ಮತ್ತೆ ಮರಳಿ ಸಭೆಗೆ ಬರಲಿಲ್ಲ. ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಹೀಗಾಗಿ ಸಭೆಗೆ ಬಂದಿದ್ದ ಅಧಿಕಾರಿಗಳು ಕೂಡ ಒಬ್ಬೊಬ್ಬರಾಗಿ ಹೊರನಡೆದರು. ಸಭೆ ನಡೆಸಲು ಬಹುಮತ ಇದ್ದರೂ ಕೂಡ ಪೌರಾಯುಕ್ತರ ಅನುಪಸ್ಥಿತಿಯಿಂದ ಸಭೆ ರದ್ದಾಯಿತು. 

ಸದಸ್ಯರಿಗೆ ಅಗೌರವ– ಕ್ರಮಕ್ಕೆ ಒತ್ತಾಯ: ‘ಪೌರಾಯುಕ್ತರು 7 ದಿನ ಮುಂಚಿತವಾಗಿ ಸಭೆ ಕರೆದಿದ್ದರು. ಈಗ ಅವರೇ ಸಭೆಗೆ ಬಾರದೆ ಸದಸ್ಯರಿಗೆ ಅಗೌರವ ತೋರಿದ್ದಾರೆ. ಕೂಡಲೇ ಇವರನ್ನು ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡುತ್ತೇವೆ’ ಎಂದು ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ತಿಳಿಸಿದರು.

ನೂತನ ಸದಸ್ಯರು ಪ್ರಮಾಣ ವಚನ ಮಾಡಬೇಕಿತ್ತು. ಎರಡು ವರ್ಷ ನಾಲ್ಕು ತಿಂಗಳಿಂದ ನಗರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಾಗಿ ಸಭೆ ನಡೆಸಿ, ಅಭಿವೃದ್ಧಿಯ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಹಾಜರಾತಿ ಪುಸ್ತಕಕ್ಕೆ ಸದಸ್ಯರ ಸಹಿಯನ್ನು ಪಡೆದ ಪೌರಾಯುಕ್ತರು ಹೇಳದೇ ಕೇಳದೇ ನಾಪತ್ತೆಯಾಗಿದ್ದಾರೆ‌’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಗತಿ ಪರಿಶೀಲನೆ: ಪೌರಾಯುಕ್ತರ ಹಾಗೂ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸಾಮಾನ್ಯ ಸಭೆ ನಡೆಸಲು ಅಧ್ಯಕ್ಷರು ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಸಭೆಗೆ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ಹಾಗೂ 24X7 ನೀರು ಸರಬರಾಜು ಕಾಮಗಾರಿಯ ಗುತ್ತಿಗೆದಾರರು ಆಗಮಿಸಿದ್ದ ಕಾರಣಕ್ಕೆ ಅಧ್ಯಕ್ಷರು ಅವರೊಂದಿಗೆ ನಗರದಲ್ಲಿ ನಡೆದಿರುವ ನೀರು ಸರಬರಾಜು ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲಿಸಿದರು.

ಸಭೆಯಲ್ಲಿ ನಗರಸಭಾ ಸದಸ್ಯರಾದ ಇಮಾಮ ಜಾಫರ್‌ಖಾನ್‌ ಪಠಾಣ, ನಿಂಗರಾಜ ಶಿವಣ್ಣನವರ, ಗಣೇಶ ಬಿಷ್ಟಣ್ಣನವರ, ಪೀರಸಾಬ ಚೋಪದಾರ, ಸಚಿನ್ ಡಂಬಳ, ಮಲ್ಲಿಕಾರ್ಜುನ ಸಾತೇನಹಳ್ಳಿ, ನಾಗರಾಜ ತಳವಾರ, ರವಿ ದೊಡ್ಡಮನಿ, ವೆಂಕಟೇಶ ಬಿಜಾಪುರ, ಶಶಿಕಲಾ ಮಾಳಗಿ, ಪೂಜಾ ಹಿರೇಮಠ, ವಿಶಾಲಾಕ್ಷಿ ಆನವಟ್ಟಿ, ಬಸವ್ವ ಹಾವೇರಿ, ಉಮೇಶ ಕುರುಬರ, ದಾದಾಪೀರ ಗುಡುಗೇರಿ, ರೇಣುಕಾ ಪುತ್ರನ್, ಜಯರಾಬಿ ಖಾಜಿ ಮತ್ತಿತರರು ಹಾಜರಿದ್ದರು.

ಸಭೆ ಮುಂದೂಡಿಕೆಗೆ ಬಿಜೆಪಿ ಸದಸ್ಯರ ಮನವಿ
ಹಾವೇರಿ ನಗರಸಭೆಯ ಸಾಮಾನ್ಯ ಸಭೆಯನ್ನು ಹೈಕೋರ್ಟ್‌ ತೀರ್ಪು 19-11-2020 ಅನ್ವಯ ಮುಂದೂಡುವಂತೆ ಬಿಜೆಪಿ ಸದಸ್ಯರು ನ. 24ರಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. 

ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಕುರಿತು ಸರಕಾರ ಹೊರಡಿಸಿದ್ದ ಅ.8ರ ಮೀಸಲಾತಿ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿ ನ.19ರಂದು ಸ್ಪಷ್ಟವಾಗಿ ಆದೇಶ ಹೊರಡಿಸಿರುವುದರಿಂದ ಹಾವೇರಿ ನಗರಸಭೆಗೆ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರವು ಮೊಟಕುಗೊಳ್ಳುತ್ತದೆ. ಹೀಗಾಗಿ ಸಾಮಾನ್ಯ ಸಭೆಯನ್ನು ಮುಂದೂಡಬೇಕೆಂದು ಬಿಜೆಪಿ ನಗರಸಭಾ ಸದಸ್ಯರಾದ ಗಿರೀಶ ತುಪ್ಪದ, ಎಸ್.ಎಸ್. ಹುಲಿಕಂತಿಮಠ, ಬಿ.ಬಿ. ಬೆಳವಡಿ, ಸವಿತಾ ಕಂಬಳಿ, ಲತಾ ಮಲಗೋಡ ಮತ್ತಿತರು ಮನವಿ ಮಾಡಿದರು. 

***

ಪೌರಾಯುಕ್ತರು ಗೈರು ಹಾಜರಾದ ಬಗ್ಗೆ ಆಡಳಿತ ಮಂಡಳಿಯವರು ದೂರು ಸಲ್ಲಿಸಿದ್ದಾರೆ. ಹೀಗಾಗಿ ಕಾರಣ ಕೇಳಿ ಪೌರಾಯುಕ್ತರಿಗೆ ಷೋಕಾಸ್‌ ನೋಟಿಸ್ ಕೊಡಲಾಗಿದೆ‌
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.