ಮಂಗಳವಾರ, ನವೆಂಬರ್ 30, 2021
22 °C
ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಸಿದ್ದರಾಮಯ್ಯರ ‘ಭಾಗ್ಯ’ಗಳು ಮಧ್ಯವರ್ತಿಗಳ ಪಾಲು: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಘೋಷಣೆ ಮಾಡಿದ ‘ಭಾಗ್ಯ’ದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪದೇ ಮಧ್ಯವರ್ತಿಗಳ ಪಾಲಾದವು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ, ಪ್ರತಿಪಕ್ಷದಲ್ಲಿ ಕೂರಿಸಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. 

ಹಾನಗಲ್ ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಉಪಚುನಾವಣೆ ಪ್ರಚಾರಾರ್ಥ ಏರ್ಪಡಿಸಿದ್ದ ಬಿಜೆಪಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಅನ್ನಭಾಗ್ಯ’ ಯೋಜನೆ ಜಾರಿ ಮಾಡಿದ ನಂತರವೇ ಜನ ಅಕ್ಕಿ ನೋಡಿದ್ದಾರೆ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. 1947ರಿಂದಲೂ ಪಡಿತರದಲ್ಲಿ ಅಕ್ಕಿ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ₹29 ಹಾಗೂ ರಾಜ್ಯ ಸರ್ಕಾರದ ಪಾಲು ₹3 ರೂಪಾಯಿ ಮಾತ್ರ. ನರೇಂದ್ರ ಮೋದಿ ಫೋಟೊ ಬಳಸದೆ, ಸಿದ್ದರಾಮಯ್ಯ ಅವರು ತಮ್ಮ ಫೋಟೊ ಮಾತ್ರ ಹಾಕಿಕೊಂಡು ಮೆರೆಯುತ್ತಾರೆ ಎಂದು ಕುಟುಕಿದರು. 

ಕಾಂಗ್ರೆಸ್‌ಗೆ ಸೋಲಿನ ಭಯ: ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಈ ಹಿಂದೆ ಗೆದ್ದಾಗಲೆಲ್ಲ ಜನರ ಬೆಂಬಲದಿಂದ ಗೆದ್ದಿದ್ದೇವೆ ಎಂದು ಬೀಗುತ್ತಿದ್ದರು. ಅದೇ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದರೆ ಹಣದ ಬಲದಿಂದ ಎಂದು ಆರೋಪಿಸುತ್ತಾರೆ. ಯಾಕೆ ನಮಗೆ ಜನರು ವೋಟು ಹಾಕಿರಲ್ವಾ?. ಕಾಂಗ್ರೆಸ್‌ಗೆ ಸೋಲಿನ ಭಯ ಕಾಡುತ್ತಿದೆ. ನಮಗೆ ಜನಶಕ್ತಿಯ ಮೇಲೆ ಪೂರ್ಣ ವಿಶ್ವಾಸವಿದೆ ಎಂದರು.

 

ಕಾಂಗ್ರೆಸ್‌ನವರಿಗೆ ಕಾಮಾಲೆ ಕಣ್ಣು: ಬೆಳಗಾಲಪೇಟೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದಲ್ಲಿ 100 ಕೋಟಿ ಕೋವಿಡ್‌ ಲಸಿಕಾಕರಣದ ಸಾಧನೆಯ ಸಂಭ್ರಮವನ್ನು ಆಚರಿಸಬಾರದು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯಗೆ ಯಾಕಿಂಥ ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲ. ಲಸಿಕೆ ಬಂದಾಗ ತಗೋಬೇಡಿ ಎಂದು ಜನರನ್ನು ಹಾದಿ ತಪ್ಪಿಸಿದರು. ಜನರು ಸರದಿಯಲ್ಲಿ ನಿಂತಾಗ ಎಲ್ಲಿದೆ ವ್ಯಾಕ್ಸಿನ್‌ ಎಂದು ಕಿಡಿಕಾರಿದರು. ಪ್ರತಿಯೊಂದನ್ನೂ ಟೀಕೆ ಮಾಡುವ ಕಾಂಗ್ರೆಸ್‌ ನಾಯಕರು ಅಧಿಕಾರ ಸಿಕ್ಕಾಗ  ಮಾತ್ರ ಸಮಾಧಾನವಾಗಿರುತ್ತಾರೆ ಎಂದು ಜರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು