ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ ಬಿಡಿ, ಬಿಜೆಪಿಗೆ ಅಧಿಕಾರ ಕೊಡಿ: ಕೋಳಿವಾಡ

ವಿರೋಧ ಪಕ್ಷದಲ್ಲಿ ಕೂರೋಣ; ಕಾಂಗ್ರೆಸ್ ಮುಂಖಡರ ಸಲಹೆ
Last Updated 10 ಜುಲೈ 2019, 15:47 IST
ಅಕ್ಷರ ಗಾತ್ರ

ಹಾವೇರಿ: ‘ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ, ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ವಿರೋಧ ಪಕ್ಷದಲ್ಲಿ ಕೂತರೂ ಪರ್ವಾಗಿಲ್ಲ. ಸ್ವತಂತ್ರವಾಗಿ ಆಡಳಿತ ನಡೆಸಿ ಜನರ ವಿಶ್ವಾಸ ಗೆಲ್ಲಬೇಕು. ಈ ಬಗ್ಗೆ ನಮ್ಮವರು ಇನ್ನಾದರೂ ಚಿಂತಿಸಬೇಕು....’

ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಅವರು ತಮ್ಮ ಪಕ್ಷದ ಮುಖಂಡರಿಗೆ ನೀಡಿರುವ ಸಲಹೆ ಇದು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನು ‘ಮೈತ್ರಿ’ಯನ್ನು ವಿರೋಧಿಸಿದ್ದೆ. ಇದರಿಂದ ಪಕ್ಷಕ್ಕೆ ಭಾರೀ ಹಿನ್ನಡೆ ಆಗುತ್ತದೆ ಎಂದು ಸೂಚಿಸಿದ್ದೆ. ಈಗ ಮತ್ತೆ ಹೊಂದಾಣಿಕೆ ಮಾಡುವ ಸಂದರ್ಭದಲ್ಲೂ ಅದನ್ನೇ ಪುನರುಚ್ಛರಿಸಿದ್ದೆ. ಆದರೆ, ಯಾರೂ ನನ್ನ ಮಾತು ಕೇಳಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೈತ್ರಿ ಮಾಡಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಹತ್ತು ಸ್ಥಾನಗಳನ್ನಾದರೂ ಗೆಲ್ಲುತ್ತಿದ್ದೆವು. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತ, ಪಕ್ಷೇತರರಿಗೆ ಅಧಿಕಾರ ನೀಡಿದ ನಾಯಕರು, ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಈಗ ಬಿಜೆಪಿ ಸರ್ಕಾರ ರಚಿಸಿಕೊಳ್ಳಲಿ.ನಾವು ವಿರೋಧ ಪಕ್ಷದಲ್ಲಿ ಕೂರೋಣ.ಹೀಗಾದರೆ ಮಾತ್ರ ಕಾಂಗ್ರೆಸ್‌ಗೆ ಭವಿಷ್ಯವಿದೆ’ ಎಂದು ಸಲಹೆ ನೀಡಿದರು.

ಅಂಗೀಕಾರಕ್ಕೆ ವಿಳಂಬವೇಕೆ: ‘ನಾನೂ ಸ್ಪೀಕರ್ ಆಗಿದ್ದವನು. ಹಲವಾರು ರಾಜೀನಾಮೆ ಅರ್ಜಿಗಳನ್ನು ಸ್ವೀಕರಿಸಿ, ಅಂಗೀಕರಿಸಿದ್ದೇನೆ. ಎಂದೂ ಸಂವಿಧಾನ ಮೀರಿ ನಡೆದುಕೊಂಡಿಲ್ಲ. ಅರ್ಜಿ ಯೋಗ್ಯವಾಗಿಲ್ಲದಿದ್ದರೆ ಅಥವಾ ಯಾರದ್ದೋ ಬಲವಂತದಿಂದ ರಾಜೀನಾಮೆ ಸಲ್ಲಿಸಿದ್ದರೆ ಮಾತ್ರ ತಿರಸ್ಕರಿಸಬಹುದು. ಈ ಎರಡು ಅಂಶಗಳನ್ನು ಬಿಟ್ಟು ರಾಜೀನಾಮೆ ಅಂಗೀಕರಿಸದಿರಲು ಬೇರೆ ಆಯ್ಕೆಗಳೇ ಇಲ್ಲ. ಆದರೂ, ಏಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದೂ ಹೇಳಿದರು.

ಶಾಸಕರನ್ನು ವಾಪಸ್ ಕರೆತರಲು ಡಿ.ಕೆ.ಶಿವಕುಮಾರ್ ಮುಂಬೈನ ಹೋಟೆಲ್ ಬಳಿ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿದ ಕೋಳಿವಾಡ, ‘ಅಲ್ಲಿರುವ ಶಾಸಕರೆಲ್ಲ ಲಕ್ಷಾಂತರ ಮಂದಿಯಿಂದ ಮತ ಹಾಕಿಸಿಕೊಂಡು ಬಂದವರು. ಹೀಗಾಗಿ, ನಿರ್ಣಯ ತೆಗೆದುಕೊಳ್ಳುವುದಕ್ಕೆ ಅವರಿಗೂ ಹಕ್ಕಿದೆ. ಮನಸ್ಸಿದ್ದರೆ ಅವರೇ ಬರುತ್ತಾರೆ. ಅದನ್ನು ಬಿಟ್ಟು ಈ ರೀತಿ ದೌರ್ಜನ್ಯ ಮಾಡುವುದು ಸರಿಯಲ್ಲ’ ಎಂದರು.

‘ಬಿ.ಸಿ.ಪಾಟೀಲಗೆ ಬೆಂಬಲ’

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಶಾಸಕ ಬಿ.ಸಿ.ಪಾಟೀಲ. ಹೀಗಾಗಿ, ಅವರಿಗೆ ಮಂತ್ರಿಗಿರಿ ಕೊಡಬೇಕೆಂದು ನಾನೂ ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಮನವಿ ಮಾಡಿದ್ದೆ. ಆದರೆ, ಪ್ರಯೋಜನ ಆಗಲಿಲ್ಲ. ಅವರು ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ. ಅವರ ನಿರ್ಧಾರವನ್ನು ನಾನು ಸಂಪೂರ್ಣ ಬೆಂಬಲಿಸುತ್ತೇನೆ’ ಎಂದೂ ಕೋಳಿವಾಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT