ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ‘ಶತಾಯುಷಿ’ಗೆ ಶತಕೋಟಿ ನಮನ

Last Updated 21 ಜನವರಿ 2019, 16:19 IST
ಅಕ್ಷರ ಗಾತ್ರ

ಹಾವೇರಿ:ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೂ ಹಾವೇರಿಗೂ ಅವಿನಾಭಾವ ನಂಟು. ಶ್ರೀಗಳು ಜಿಲ್ಲೆಯಲ್ಲಿ ಅಪಾರ ಭಕ್ತರನ್ನು ಹೊಂದಿದ್ದರೆ, ಇಲ್ಲಿನ ಹಲವು ಮಠಗಳ ಶ್ರೀಗಳು, ಗಣ್ಯರು ಸೇರಿದಂತೆ ಪ್ರಮುಖರು ಅವರ ಮಾರ್ಗದರ್ಶನ ಪಡೆಯುತ್ತಿದ್ದರು.

ಹುಕ್ಕೇರಿಮಠದ ಲಿಂ.ಶಿವಲಿಂಗ ಸ್ವಾಮೀಜಿ ಜನ್ಮ ಶತಮಾನೋತ್ಸವವನ್ನು ಕಳೆದ ವರ್ಷ (2018) ಆಚರಿಸಲಾಗಿತ್ತು. ಅದರ ಅಂಗವಾಗಿ ಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ತುಮಕೂರಿನಲ್ಲಿ 2018ರ ಮಾರ್ಚ್‌ 14ರಂದು ಶಿವಕುಮಾರ ಸ್ವಾಮೀಜಿಗೆ ‘ಶತಾಯಿಷಿ ಸ್ವಾಮೀಜಿಗೆ ಶತಕೋಟಿ ನಮನ’ ಎಂದು ಗೌರವ ಸಮರ್ಪಿಸಲಾಗಿತ್ತು.

‘ನಮ್ಮ ಹಿರಿಯ ಗುರುಗಳಿಗೂ ಶಿವಕುಮಾರ ಸ್ವಾಮೀಜಿಗೂ ಅವಿನಾಭವ ಸಂಬಂಧವಿತ್ತು. ಇದೇ ಪರಂಪರೆಯನ್ನು ನಮ್ಮ ಮಠವು ಸಿದ್ದಗಂಗಾ ಮಠದ ಜೊತೆ ಮುಂದುವರಿಸಿಕೊಂಡು ಬಂದಿದೆ. ಹೀಗಾಗಿ, ಶತಮಾನೋತ್ಸವದ ಗೌರವವನ್ನು ಅವರಿಗೆ ಸಮರ್ಪಿಸಿದ್ದೆವು. ಅವರ ಅಗಲಿಕೆಯು ಮಠ ಹಾಗೂ ನಮಗೆ ಬಹಳ ನೋವನ್ನು ಉಂಟುಮಾಡಿದೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.

ಮಾರ್ಗದರ್ಶನ:‘ಚಿತ್ರದುರ್ಗ ಮುರುಘಾ ಮಠ, ಹಾವೇರಿ ಹೊಸಮಠ ಹಾಗೂ ತುಮಕೂರಿನ ಸಿದ್ದಗಂಗಾ ಮಠದ ನಡುವೆ ಉತ್ತಮ ಬಾಂಧವ್ಯವಿದೆ. ಸಿದ್ದಗಂಗಾ ಶ್ರೀಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ನಡೆದಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು, ಅವರ ನಡೆ–ನುಡಿ, ಮಾರ್ಗದರ್ಶನವನ್ನು ಪಡೆದ ಭಾಗ್ಯವೂ ನಮ್ಮದಾಗಿತ್ತು’ ಎಂದು ಹೊಸಮಠದ ಚರಮೂರ್ತಿ ಬಸವ ಶಾಂತಲಿಂಗ ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ.

ಅಧ್ಯಾತ್ಮಿಕದ ಜೊತೆ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಹಲವಾರು ವಿಚಾರಗಳಲ್ಲಿ ಶ್ರೀಗಳು ‘ದೇವರು’ ಆಗಿದ್ದರು. ಹಲವಾರು ಸಂದರ್ಭದಲ್ಲಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದೇವೆ. ‘ನಡೆದಾಡುವ ದೇವರು ಇನ್ನಿಲ್ಲ’ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ, ಅವರ ಕಾಯಕ ಮತ್ತು ನೆನಪುಗಳು ಚಿರಸ್ಥಾಯಿ ಎಂದು ಸಂಸದ ಶಿವಕುಮಾರ್ ಉದಾಸಿ ಸ್ಮರಿಸಿಕೊಂಡಿದ್ದಾರೆ.

ನಗರದಲ್ಲಿ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ ಹಾಗೂ ಪ್ರಮುಖರು ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT