ಭಾನುವಾರ, ಜುಲೈ 25, 2021
21 °C
ಜಿಲ್ಲೆಯಲ್ಲಿ 26ಕ್ಕೇರಿದ ಕೋವಿಡ್‌ ಪ್ರಕರಣಗಳು: ಬ್ಯಾಡಗಿ ಠಾಣೆ ಸೀಲ್‌ಡೌನ್‌

ಹಾವೇರಿ | ಕಾನ್‌ಸ್ಟೆಬಲ್‌ ಸೇರಿ ಇಬ್ಬರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಪೊಲೀಸ್ ಕಾನ್‌ಸ್ಟೆಬಲ್‌ ಸೇರಿ ಮತ್ತಿಬ್ಬರಿಗೆ ಕೋವಿಡ್ ಸೋಂಕು ಸೋಮವಾರ ದೃಢಪಟ್ಟಿದೆ. ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಐದು ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೆ 26 ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಸೋಮವಾರ 41 ವರ್ಷದ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಪಿ-7030 ವ್ಯಕ್ತಿಗೆ ಹಾಗೂ ಗುತ್ತಲದ 9 ವರ್ಷದ ಪಿ-7031 ಬಾಲಕನಿಗೆ ಸೋಂಕು ದೃಢಗೊಂಡಿದೆ. ಈ ಬಾಲಕ ಪಿ–5004ರ ಪ್ರಾಥಮಿಕ ಸಂಪರ್ಕಿತನಾಗಿದ್ದಾನೆ. ಇಬ್ಬರನ್ನು ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪಿ-7030 ಪ್ರವಾಸ ಹಿನ್ನೆಲೆ: ಪಿ-7030 ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಜೂನ್ 3 ಹಾಗೂ 4 ರಂದು ಎರಡು ದಿನ ಕರ್ತವ್ಯಕ್ಕೆ ರಜೆ ಹಾಕಿ ದಾವಣಗೆರೆ ಜಿಲ್ಲೆ ಮಲೆಬೆನ್ನೂರಿನ ಪೊಲೀಸ್ ವಸತಿ ಗೃಹದಲ್ಲಿರುವ ಅಕ್ಕನ ಮನೆಯಲ್ಲಿ ಉಳಿದಿದ್ದ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದರು. 

ಜೂನ್ 5ರಂದು ಹರಿಹರದ ಅಮೃತ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಮಗನ ಜಾಂಡೀಸ್ ರಕ್ತ ತಪಾಸಣೆಗಾಗಿ ಹೋಗಿದ್ದರು. ನಂತರ ತನ್ನ ಹೆಂಡತಿ ಹಾಗೂ ಮಗನೊಂದಿಗೆ ಕದರಮಂಡಲಗಿ ಗ್ರಾಮದಲ್ಲಿರುವ ತನ್ನ ಮನೆಗೆ ಬಂದಿದ್ದಾರೆ. ರಾತ್ರಿ ಬ್ಯಾಡಗಿ ಠಾಣೆಗೆ ಬಂದು ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಾ ಮಾಹಿತಿ ಸಂಗ್ರಹಣೆಗಾಗಿ ನಗರದ ವಿವಿಧ ಸ್ಥಳಗಳಲ್ಲಿ ಸಂಚರಿಸಿರುತ್ತಾರೆ.

ಜೂನ್ 8ರಂದು ಬ್ಯಾಡಗಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಬ್ಯಾಡಗಿ ಕೃಷಿ ಉತ್ಪನ್ನ ಸಂಸ್ಕರಣ ಘಟಕದ ಉಪಚುನಾವಣೆಯ ಸಂದರ್ಭದಲ್ಲಿ ಎಸ್.ಬಿ. ಕರ್ತವ್ಯ ನಿರ್ವಹಿಸಿರುತ್ತಾರೆ. ಇವರ ಗಂಟಲು ದ್ರವದ ಮಾದರಿಯನ್ನು ಜೂನ್ 12ರಂದು ಲ್ಯಾಬ್‌ಗೆ ಕಳುಹಿಸಲಾಗಿದ್ದು, ಜೂನ್ 13ರ ರಾತ್ರಿ ಬಂದ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 

74 ಮಂದಿ ಸಂಪರ್ಕಿತರು: ಸೋಂಕಿತ ಕಾನ್‌ಸ್ಟೆಬಲ್‌ ಮನೆಯ 19 ಸದಸ್ಯರು, 45 ಆರಕ್ಷಕ ಸಿಬ್ಬಂದಿ ಹಾಗೂ ತಾಲ್ಲೂಕು ಕಚೇರಿಯ 10 ಜನ ಸೇರಿದಂತೆ 74 ಜನರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಈವರೆಗೆ ನಾಲ್ಕು ಜನರನ್ನು ದ್ವಿತೀಯ ಸಂಪರ್ಕದಲ್ಲಿ ಗುರುತಿಸಲಾಗಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಬ್ಯಾಡಗಿ ಪೊಲೀಸ್ ಠಾಣೆ, ಬ್ಯಾಡಗಿ ಪೊಲೀಸ್ ವಸತಿ ಗೃಹವನ್ನು ಸೀಲ್‍ಡೌನ್ ಮಾಡಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳಿಗೆ ಕಾಗಿನೆಲೆ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.

ಪಿ-7031 ಪ್ರವಾಸ ಹಿನ್ನೆಲೆ: ಸೋಂಕಿತ ಬಾಲಕ ತಂದೆ-ತಾಯಿಯೊಂದಿಗೆ ಗುತ್ತಲ ನಗರದ ಆಂಗ್ಲಾಪುರ ಓಣಿಯ ವಾಲ್ಮೀಕಿ ನಗರದಲ್ಲಿ ವಾಸವಾಗಿದ್ದು, ಬಾಲಕ ಮತ್ತು ಆತನ ಕುಟುಂಬದವರು ಖಲಾಲ್ ಪ್ಲಾಟ್ ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ಆತನ ದೊಡ್ಡಪ್ಪನ ಮನೆಗೆ ಕಾರ ಹುಣ್ಣಿಮೆ ನಿಮಿತ್ತ ಜೂನ್‌ 5ರಂದು ಹೋಗಿ ರಾತ್ರಿ ಊಟ ಮಾಡಿ ಮರಳಿ ಮನೆಗೆ ಬಂದಿರುತ್ತಾನೆ. ದೊಡ್ಡಪ್ಪನ ಮನೆ ಪಿ– 5004 ಸೋಂಕಿತಳ ಮನೆಯ ಸಮೀಪ ಇರುವುದರಿಂದ ಈ ಬಾಲಕ ದ್ವಿತೀಯ ಸಂಪರ್ಕಿತನೆಂದು ಗುರುತಿಸಿ ಈತನ ಗಂಟಲು ದ್ರವ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು