ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕನಿಗೆ ವಿಮೆ ಮೊತ್ತ ಪಾವತಿಸಿ

ಎಲ್‌ಐಸಿಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ
Last Updated 16 ಮಾರ್ಚ್ 2023, 13:53 IST
ಅಕ್ಷರ ಗಾತ್ರ

ಹಾವೇರಿ: ವಿಮೆ ಮೊತ್ತವನ್ನು ಗ್ರಾಹಕನಿಗೆ 30 ದಿನದೊಳಗಾಗಿ ಪಾವತಿಸುವಂತೆ ಜೀವ ವಿಮಾ ನಿಗಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ ಹೊರಡಿಸಿದೆ.

ಹಾನಗಲ್ ತಾಲ್ಲೂಕು ಬೊಮ್ಮನಹಳ್ಳಿ ಗ್ರಾಮದ ಸೋಮಪ್ಪ ಬಂಕಪ್ಪ ಕಲ್ಯಾಕೊಂಡ ಅವರು ಎಲ್.ಐ.ಸಿ. ಏಜೆಂಟರಾದ ಸಂಜಯ ನಿಂಗಪ್ಪ ಟೋಪೋಜಿ ಅವರ ಮೂಲಕ ಧಾರವಾಡ ಜೀವ ವಿಮಾ ನಿಗಮದ ₹10 ಲಕ್ಷ ಹಾಗೂ ₹5 ಲಕ್ಷದ 16 ವರ್ಷಗಳ ಅವಧಿಯ ಎರಡು ಎಂಡೋಮೆಂಟ್ ಪಾಲಿಸಿಗಳನ್ನು 2015 ರಂದು ಪಡೆದಿದ್ದರು ಹಾಗೂ ಮಹೇಶ ಸೋಮಪ್ಪ ಕ್ಯಾಲಕೊಂಡ ಅವರನ್ನು ನಾಮಿನಿ ಮಾಡಿದ್ದರು. 2015ರಿಂದ 2018ರವರೆಗೆ ಪಾಲಿಸಿ ಪ್ರೀಮಿಯಂ ಮೊತ್ತವನ್ನು ಪಾವತಿಸಿದ್ದರು.

ಸೋಮಪ್ಪ ಬಂಕಪ್ಪ ಕಲ್ಯಾಕೊಂಡ ಅವರು 2018ರಲ್ಲಿ ಮರಣ ಹೊಂದಿದ್ದರಿಂದ ಮಹೇಶ ಸೋಮಪ್ಪ ಕ್ಯಾಲಕೊಂಡ ಅವರು ವಿಮೆ ಹಣ ಪಡೆಯಲು ಅಗತ್ಯ ದಾಖಲೆಗಳನ್ನು ಎಲ್.ಐ.ಸಿ. ಏಜೆಂಟರಿಗೆ ನೀಡಿದ್ದರು. ಏಜೆಂಟರು ಧಾರವಾಡ ಜೀವ ವಿಮಾ ನಿಗಮಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು. ಪಾಲಿಸಿದಾರರಿಗೆ 65 ವರ್ಷವಾಗಿದ್ದು 55 ವರ್ಷ ಎಂದು ತಪ್ಪು ಮಾಹಿತಿ ನೀಡಿ ಪಾಲಿಸಿ ಮಾಡಿಸಿದ್ದರಿಂದ ಪಾಲಿಸಿ ಮೊತ್ತ ಕ್ಲೇಮ್ ಮಾಡಲು ಬರುವುದಿಲ್ಲ ಎಂದು ಅರ್ಜಿ ತಿರಸ್ಕರಿಸಿದ್ದರು.

ಮಹೇಶ ಸೋಮಪ್ಪ ಕ್ಯಾಲಕೊಂಡ ಅವರು ಪಾಲಿಸಿ ಮೊತ್ತಕ್ಕಾಗಿ ಧಾರವಾಡ ಜೀವ ವಿಮಾ ನಿಗಮ ಹಾಗೂ ಎಲ್.ಐ.ಸಿ. ಏಜೆಂಟರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯರಾದ ಉಮಾದೇವಿ. ಎಸ್. ಹಿರೇಮಠ ನೇತೃತ್ವದ ತಂಡ ಎರಡು ಪಾಲಿಸಿ ಮೊತ್ತ ₹10 ಲಕ್ಷ ಹಾಗೂ ₹5 ಲಕ್ಷ ಮೊತ್ತವನ್ನು ಶೇ 6ರ ಬಡ್ಡಿ ಸಮೇತ 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹2 ಸಾವಿರ ಹಾಗೂ ಪ್ರಕರಣದ ಖರ್ಚು ₹2 ಸಾವಿರ ಪಾವತಿಸಲು ಆದೇಶಿಸಿದೆ.

ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT