ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಕೋವಿಡ್‌ ಲಸಿಕೆ 7ರಿಂದ

ತಾಲ್ಲೂಕು ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿಕೆ
Last Updated 4 ಜೂನ್ 2021, 14:52 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿರುವ ಅಂಗವಿಕಲರು, ಬುದ್ಧಿಮಾಂಧ್ಯರು ಹಾಗೂ ಹಿರಿಯ ನಾಗರಿಕರಿಗೆ ಜೂನ್‌ 7ರಿಂದ ಗ್ರಾಮ ಪಂಚಾಯಿತಿವಾರು ಕೋವಿಡ್ ಲಸಿಕೆ ಆರಂಭಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಅಂಗವಿಕಲರಿಗೆ ಲಸಿಕೆ ಕಾರ್ಯಕ್ರಮ ಕುರಿತಂತೆ ತಾಲ್ಲೂಕು ಅಧಿಕಾರಿಗಳೊಂದಿಗೆ ‘ವಿಡಿಯೊ ಸಂವಾದ’ ನಡೆಸಿದ ಅವರು, ಶನಿವಾರದೊಳಗಾಗಿ ಗ್ರಾಮ ಪಂಚಾಯಿತಿವಾರು ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕುವ ಕುರಿತಂತೆ ‘ಮೈಕ್ರೋ ಪ್ಲಾನ್’ ಸಿದ್ಧಪಡಿಸಿಕೊಳ್ಳಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಿವೆ, 67 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆಯಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳ ಹಳ್ಳಿಗಳ ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕುವುದು ವೈದ್ಯಾಧಿಕಾರಿ ಕರ್ತವ್ಯವಾಗಿದೆ. ಆಯಾ ವೈದ್ಯಾಧಿಕಾರಿ ಗ್ರಾಮ ಪಂಚಾಯಿತಿಯ ಲಸಿಕಾ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಲಸಿಕೆಗೆ ಅಗತ್ಯವಾದ ಜಾಗವನ್ನು ಗುರುತಿಸಿ ಕುಡಿಯುವ ನೀರು, ನೆರಳು, ಮೂಲ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಗವಿಕಲ ಕಲ್ಯಾಣಾಧಿಕಾರಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

18 ವರ್ಷ ಮೇಲ್ಪಟ್ಟ 44 ವರ್ಷದವರೆಗೆ ಹಾಗೂ 44 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಲಸಿಕೆ ಹಾಕಲಾಗುವುದು. ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರಿಗೆ ಹಾಗೂ 90 ವರ್ಷ ಮೇಲ್ಪಟ್ಟ ಹಿರಿಯರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಪಡೆಯಲು ಬರುವವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಾಹನ ವ್ಯವಸ್ಥೆ ಮಾಡಬೇಕು. ಅವರ ಆರೈಕೆದಾರರಿಗೂ ಲಸಿಕೆ ಹಾಕಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ಅಂಗವಿಕಲರಿಗೆ ಲಸಿಕೆ ಹಾಕುವ ಕುರಿತಂತೆ ಗ್ರಾಮ ಪಂಚಾಯತಿವಾರು ‘ಮೈಕ್ರೋ ಪ್ಲಾನ್‌’ ರೂಪಿಸಬೇಕು. ಒಂದು ಪಾಯಿಂಟ್‍ನಲ್ಲಿ ಕನಿಷ್ಠ ನೂರು ಜನರಿಗೆ ಲಸಿಕೆ ಹಾಕಬೇಕು. ಲಸಿಕೆಯನ್ನು ವ್ಯರ್ಥ ಮಾಡಬಾರದು ಎಂದರು.

ಜಿಲ್ಲೆಯ 781 ಗ್ರಾಮಗಳಲ್ಲಿ 885 ಮಾನಸಿಕ ಅಸ್ವಸ್ಥರು, 2450 ಬುದ್ಧಿಮಾಂಧ್ಯರು, 4,533 ದೃಷ್ಟಿದೋಷವುಳ್ಳವರು, 6,855 ಶ್ರವಣದೋಷವುಳ್ಳವರು, 20,735 ಅಂಗವಿಕಲರು, 1,826 ಬಹು ವಿವಿಧ ವಿಕಲಚೇತನರು ಒಳಗೊಂಡಂತೆ 37,284 ಅಂಗವಿಕಲರು ಈ ಪೈಕಿ 1574 ಜನ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಕೋವಿಡ್ ಲಸಿಕೆ ಕುರಿತಂತೆ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪರಶುರಾಮ ಶೆಟ್ಟೆಪ್ಪನವರ, ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ಜಾಫರ್ ಶರೀಫ್, ತಾಲ್ಲೂಕು ಪಂಚಾಯತಿ ಕಾರ್ಯದರ್ಶಿ ಬಸವರಾಜಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT