ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದಲ್ಲಿ ‘ತುರ್ತು ತಂಡ’ ರಚಿಸಿ

ಮಳೆ-ನೆರೆ-ಕೊರೊನಾ ಪರಿಸ್ಥಿತಿ ಕುರಿತು ಜಿಲ್ಲಾಡಳಿತದೊಂದಿಗೆ ಗೃಹ ಸಚಿವರ ವಿಡಿಯೊ ಸಂವಾದ
Last Updated 10 ಆಗಸ್ಟ್ 2020, 14:12 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಮತ್ತು ಶೀಘ್ರ ನೆರವಿಗೆ ಧಾವಿಸಲು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ‘ತುರ್ತು ತಂಡ’ ರಚನೆ ಮಾಡಿ. ತಾಲ್ಲೂಕುಹಾಗೂ ಜಿಲ್ಲಾ ಮಟ್ಟದಲ್ಲಿ ‘ಸಹಾಯವಾಣಿ’ ಆರಂಭಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಜಿಲ್ಲೆಯ ಮಳೆ ಪರಿಸ್ಥಿತಿ, ಪ್ರವಾಹ ಸ್ಥಿತಿಗತಿ, ಪರಿಹಾರ ಕಾರ್ಯಗಳು ಹಾಗೂ ಕೋವಿಡ್ ನಿರ್ವಹಣೆಗೆ ಕುರಿತಂತೆ ಸೋಮವಾರ ಬೆಂಗಳೂರಿನಿಂದ ಜಿಲ್ಲಾಡಳಿತದೊಂದಿಗೆ ವಿಡಿಯೊ ಸಂವಾದ ನಡೆಸಿದರು. ವರದಾ ನದಿ ಪಾತ್ರದಲ್ಲಿ ಬರುವ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿಯ ಮೇಲೆ ನಿಗಾವಹಿಸಿ ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

ಮಳೆಹಾನಿ ಹಾಗೂ ನೆರೆ ಉಂಟಾದ ಸಂದರ್ಭದಲ್ಲಿ ಜನ- ಜಾನುವಾರು ರಕ್ಷಣೆ ಹಾಗೂ ಸ್ಥಳಾಂತರಗೊಳಿಸಿ ಪುರ್ನವಸತಿ ಕಲ್ಪಿಸುವ ತುರ್ತು ಕಾರ್ಯಕ್ಕಾಗಿ ಸ್ಥಳೀಯವಾಗಿ ನೆರವಾಗಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ವಿಪತ್ತು ನಿರ್ವಹಣಾ ಸಮಿತಿ’ಗಳನ್ನು ರಚಿಸಿ ಜವಾಬ್ದಾರಿ ನೀಡಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡಿದರು.

ಜೀವಹಾನಿಗೆ ತಕ್ಷಣ ಪರಿಹಾರ:ವರದಾ ನದಿಯಲ್ಲಿ ಕೊಚ್ಚಿಹೋದ ಯುವಕನಿಗೆ ಮುಖ್ಯಮಂತ್ರಿ ಸೂಚನೆಯಂತೆ ಸರ್ಕಾರದ ಪರಿಹಾರ ಹಣ ₹5 ಲಕ್ಷವನ್ನು ಇಂದು ಸಂಜೆ ಅಥವಾ ನಾಳೆಯೊಳಗೆ ವಿತರಿಸಿ ಎಂದು ಸೂಚನೆ ನೀಡಿ, ಜನ ಹಾಗೂ ಜಾನುವಾರು ಜೀವಹಾನಿಗೆ ತಕ್ಷಣ ಪರಿಹಾರ ಪಾವತಿಸುವಂತೆ ನಿರ್ದೇಶನ ನೀಡಿದರು.

ಪ್ರಸ್ತಾವ ಸಲ್ಲಿಸಿ:ಕಳೆದ ಬಾರಿಯ ನೆರೆ ಹಾವಳಿಗೆ ತುತ್ತಾದ ಮನೆ ಪರಿಹಾರ ಹಣ ₹49.7 ಕೋಟಿ ಬಿಡುಗಡೆಯಾಗಿದೆ. ತಕ್ಷಣವೇ ಫಲಾನುಭವಿಗಳ ಖಾತೆಗೆ ಹಣ ಜಮೆಮಾಡಿ. ಪ್ರಸಕ್ತ ಮಳೆಹಾನಿ ಪರಿಹಾರವಾಗಿ ₹5 ಕೋಟಿ ಜಮೆಯಾಗಿದೆ. ಹೆಚ್ಚುವರಿಯಾಗಿ ₹5 ಕೋಟಿ ಅನುದಾನ ಬೇಡಿಕೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದರು.

ತಂಡ ರವಾನೆ:ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಶೀಘ್ರವೇ ಬೋಟ್ ಸೇರಿದಂತೆ ಅಗತ್ಯ ರಕ್ಷಣಾ ಪರಿಕರಗಳೊಂದಿಗೆ ಸುಸಜ್ಜಿತ ಎಸ್.ಡಿ.ಆರ್.ಎಫ್. ತಂಡವನ್ನು ಕಳುಹಿಸಲಾಗುವುದು. ಸ್ಥಳೀಯ ಅಗ್ನಿಶಾಮಕ ದಳದ ತಂಡದೊಂದಿಗೆ ಸಮನ್ವಯಗೊಳಿಸಿ ಜಿಲ್ಲೆಯ ವಿಪತ್ತು ನಿರ್ವಹಣೆಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಕೋವಿಡ್‍ಗೆ ಔಷಧ ದಾಸ್ತಾನು:ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಔಷಧಗಳ ಕೊರತೆಯಾಗದಂತೆ ಮುಂಜಾಗ್ರತೆಯಾಗಿ ದಾಸ್ತಾನು ಮಾಡಿಕೊಳ್ಳಿ. ಜಿಲ್ಲಾ ಆಸ್ಪತ್ರೆಯಲ್ಲಿ ಹೈ-ಫ್ಲೋ ಆಕ್ಸಿಜನ್ ವ್ಯವಸ್ಥೆಯನ್ನು ತ್ವರಿತವಾಗಿ ನವೀಕರಿಸಿ, ಸುಸಜ್ಜಿತವಾಗಿಸಿ ಸೆಂಟ್ರಲೈಸ್ ಆಕ್ಸಿಜನ್‌ ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಪ್ರತ್ಯೇಕ ತಾಂತ್ರಿಕ ಸಿಬ್ಬಂದಿ ನಿಯೋಜಿಸಿ ಎಂದರು.

ಎಸ್ಪಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT