ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಗೊಬ್ಬರದಲ್ಲಿ ಅರಳಿದ ಕೃಷಿ

ಕೃಷಿ ಕಾಯಕದಲ್ಲೂ ಸೈ, ರಾಜಕೀಯದಲ್ಲೂ ಸೈ ಎನಿಸಿದ ಸಿದ್ದಲಿಂಗೇಶ್ವರ ಕಲಿವಾಳ
Last Updated 25 ನವೆಂಬರ್ 2022, 3:53 IST
ಅಕ್ಷರ ಗಾತ್ರ

ಶಿಗ್ಗಾವಿ: ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ನಾರಾಯಪುರ ಗ್ರಾಮದ ಸಿದ್ದಲಿಂಗೇಶ್ವ ಕಲಿವಾಳ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ನಾರಾಯಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ, ಸದಸ್ಯರಾಗಿ ರಾಜಕೀಯ ಕ್ಷೇತ್ರದಲ್ಲೂ ಉತ್ತಮ ಹೆಸರು ಮಾಡಿರುವ ಇವರು ಈ ಭಾಗದ ರೈತರ ಸಮೂಹದಲ್ಲಿ ಹರ್ಷ ತಂದಿದ್ದಾರೆ.

ರೈತ ಸಿದ್ದಲಿಂಗೇಶ್ವರ 70 ಎಕರೆ ಜಮೀನು ಹೊಂದಿದ್ದು, ವಾರ್ಷಿಕವಾಗಿ ಸುಮಾರು ₹25ಲಕ್ಷದಿಂದ ₹30ಲಕ್ಷ ಆದಾಯ ತೆಗೆಯುತ್ತಾರೆ. ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ, ಅಡಿಕೆ, ಏಳು ಎಕರೆ ನೀರಾವರಿಯಲ್ಲಿ ಮತ್ತು 20 ಎಕರೆ ವನ ಬೇಸಾಯಿ ಜಮೀನಿನಲ್ಲಿ ಗೋವಿನಜೋಳ ಬೆಳೆ, 15 ಎಕರೆ ಜಮೀನಿನಲ್ಲಿ ಸೊಯಾಬಿನ್, 10 ಎಕರೆಯಲ್ಲಿ ಹತ್ತಿ, 15ಎಕರೆ ಕಬ್ಬು, ಹೈನುಗಾರಿಕೆಗಾಗಿ 3 ಎಕರೆ ಹುಲ್ಲುಗಾವಲಾಗಿಸಿದ್ದಾರೆ. ಆರು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದಾರೆ.

ಸುಮಾರು 40 ಮಾವಿನ ಗಿಡಗಳು, ತೆಗು, ಸಾಗವಾನಿ, ಬೀಟಿ, ದಾಲಚಿನ್, ಬೇವು ಸೇರಿದಂತೆ ಒಂದು ಸಾವಿರ ಗಿಡಗಳಿವೆ ಸೇರಿದಂತೆ ವಿವಿಧ ತಳಿ ಅರಣ್ಯ ಗಿಡಗಳನ್ನು ಬೆಳೆಸಲಾಗಿದೆ. 2,700 ಅಡಿಕೆ ಗಿಡಗಳು, 60 ತೆಂಗಿನ ಗಿಡಗಳನ್ನು ಬೆಳಸಲಾಗಿದೆ. 2,500 ಬಾಳೆ ಸಸಿಗಳನ್ನು ನೆಡಲಾಗಿದೆ. ಹನಿ ನೀರಾವರಿ ಆರಂಭಿಸಿ ಹೆಚ್ಚಿನ ಇಳುವರಿ ಪಡೆದಿದ್ದಾರೆ.

ಕೃಷಿಯಲ್ಲಿನ ಇವರ ಸಾಧನೆ ಗುರುತಿಸಿ ಡಾ.ಎಂ.ಎಚ್.ಮರಿಗೌಡ ತೋಟಗಾರಿಕೆ ರಾಜ್ಯ ಮಟ್ಟದ ಪ್ರಶಸ್ತಿ, ತೊಗರಿ ಬೆಳೆಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ಕೃಷಿ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಶ್ರೇಷ್ಟ ಕೃಷಿಕ ಪ್ರಶಸ್ತಿ, ತಾಲ್ಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ, ಗಂಗಮ್ಮಾತಾಯಿ ಬೊಮ್ಮಾಯಿ ಟ್ರಸ್ಟ್‌ ವತಿಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ, ರಾಜ್ಯ ಭಾರತೀಯ ಕೃಷಿಕ ಸಮಾಜದ ವತಿಯಿಂದ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಕೃಷಿ ಚಟುವಟಿಕೆಗಾಗಿ ಎಷ್ಟೇ ತಂತ್ರೋಪಕರಣಗಳು ಬಂದಿದ್ದರೂ ಸುಮಾರು 35 ಎತ್ತು, ದನ–ಕರುಗಳನ್ನು ಸಾಕಿದ್ದಾರೆ. ಅವುಗಳ ಸಗಣಿ, ಗಂಜಲದಿಂದ ಸಾವಯುವ ಗೊಬ್ಬರ ತಯಾರಿಸುತ್ತಾರೆ. ಅಲ್ಲದೆ ಹೈನುಗಾರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಾವಯವ ಗೊಬ್ಬರವನ್ನು ಒಂದು ಟ್ರೀಪ್‌ಗೆ ₹5 ಸಾವಿರದಂತೆ ಮಾರಾಟ ಮಾಡುವ ಮೂಲಕ ಪ್ರತಿ ವರ್ಷ ₹3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ.

ಮನೆಯಲ್ಲಿ ಕೃಷಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಿ ಕೃಷಿ ಗ್ರಂಥಾಲಯ ತೆರೆಯುವ ಮೂಲಕ ರೈತರಿಗೆ ಓದುವ ವ್ಯವಸ್ಥೆ ಕಲ್ಪಸಬೇಕು. ಕೃಷಿ ಸಂಶೋಧಕರು, ಕೃಷಿ ತಜ್ಞರು ಹಾಗೂ ಪಶು ವೈದ್ಯರಿಂದ ಪಡೆದ ಮಾಹಿತಿಯನ್ನು ಮತ್ತು ಕೃಷಿಯಲ್ಲಿ ನಾನು ಅಳವಡಿಸಿಕೊಂಡ ಹೊಸ ತಂತ್ರಜ್ಞಾನವನ್ನು ಇತರ ರೈತರಿಗೆ ತಿಳಿಸಬೇಕು. ಎಲ್ಲ ರೈತರು ಸಹ ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿ ಪಡೆಯಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದು ಪ್ರಗತಿಪರ ರೈತ ಸಿದ್ದಲಿಂಗೇಶ್ವರ ಹೇಳುತ್ತಾರೆ.

***

ಕಲ್ಲು ಭೂಮಿಯನ್ನೇ ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿ ಉತ್ತಮ ತೊಗರಿ ಬೆಳೆ ಬೆಳೆದಿದ್ದೇನೆ. ಭೂಮಿಯಲ್ಲಿ ಶ್ರಮ ವಹಿಸುವ ಜತೆಗೆ ಹೊಸ ತಂತ್ರಜ್ಞಾನಗಳ ಸದ್ಬಳಕೆ ಮಾಡಿದಾಗ ಹೆಚ್ಚಿನ ಆರ್ಥಿಕ ಪ್ರಬಲತೆ ಹೊಂದಲು ಸಾಧ್ಯವಿದೆ
- ಸಿದ್ದಲಿಂಗೇಶ್ವರ ಕಲಿವಾಳ, ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT