ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಬಿ.ಸಿ.ಪಾಟೀಲ

ಬೆಳೆ ಹಾನಿ: ತಕ್ಷಣ ಪರಿಹಾರ ನೀಡಲು ಸೂಚನೆ
Last Updated 6 ಸೆಪ್ಟೆಂಬರ್ 2022, 15:23 IST
ಅಕ್ಷರ ಗಾತ್ರ

ಹಿರೇಕೆರೂರು: ಬೆಳೆ ಹಾನಿ ಮತ್ತು ಮನೆ ಹಾನಿಗೆ ತಕ್ಷಣ ಪರಿಹಾರ ಕೊಡಿಸುವಲ್ಲಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಬೆಳೆ ವಿಮೆಯ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು‌, ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದು ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಮೈಮರೆತು ಕೂರದೆ ಪರಿಹಾರ ಕೊಡಿಸುವಲ್ಲಿ ಮಗ್ನರಾಗಬೇಕು. ಪರಿಹಾರದ ಸಮೀಕ್ಷೆಗಳನ್ನು ತ್ವರಿತವಾಗಿ ಮಾಡಬೇಕು ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಕೆಲವು ಇಲಾಖೆಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.

ಕಾಮಗಾರಿ ವಿಳಂಬ: ಸಣ್ಣ ನೀರಾವರಿ ಯೋಜನೆಯಲ್ಲಿ ನಡೆಯುವ ಕಾಮಗಾರಿಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಮತ್ತು ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ ಎಂಬ ದೂರುಗಳಿವೆ. ಸರ್ವೆ ಇಲಾಖೆಯಲ್ಲಿ ರೈತರು ಸಲ್ಲಿಸಿದ ಅರ್ಜಿಗಳನ್ನು ಹೆಚ್ಚು ಸಮಯ ವ್ಯಯ ಮಾಡದೇ ತ್ವರಿತವಾಗಿ ವಿಲೇವಾರಿ ಮಾಡಿ ಅರ್ಜಿದಾರರಿಗೆ ಪರಿಹಾರ ಕಲ್ಪಿಸಿ ಕೊಡಬೇಕು ಎಂದು ಸೂಚಿಸಿದರು.

ಅಬಕಾರಿ ಇಲಾಖೆಯ ಬಗ್ಗೆ ಪರಿಶೀಲನೆ ನಡೆಸಿದ ಅವರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಹಾಗೂ ಪಟ್ಟಣದ ಬಾರ್‌ಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಏಳು ತಾಸು ವಿದ್ಯುತ್‌ ನೀಡಿ:ಹೆಸ್ಕಾಂ ಇಲಾಖೆಯಿಂದ ರೈತರಿಗೆ ಪಂಪ್ ಸೆಟ್‍ಗಳಿಗೆ ಏಳು ತಾಸು ವಿದ್ಯುತ್ ಸರಬರಾಜು ಮಾಡುತ್ತಿವೆ. ಕೇವಲ ಐದು ತಾಸು ಸರಬರಾಜು ಮಾಡುತ್ತಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಂತರ ಹೆಸ್ಕಾಂ ಎಂ.ಡಿ.ಯವರ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ಹಿರೇಕೆರೂರು ತಾಲ್ಲೂಕು ಹೆಚ್ಚು ಕೃಷಿಕರನ್ನು ಹೊಂದಿದೆ. ಆದ್ದರಿಂದ ಏಳು ತಾಸು ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸಿದರು.

ಅಕ್ಕಿ ಅಕ್ರಮ ಸಾಗಣೆ: ಕ್ರಮಕ್ಕೆ ಸೂಚನೆ
ಕಂದಾಯ ಇಲಾಖೆಯಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿರುವ ಅಕ್ಕಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಅಂಥವರ ಜಾಲವು ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಇಂತಹ ಅಕ್ರಮ ಜಾಲವನ್ನು ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಪತ್ತೆ ಹಚ್ಚಿ ಕಾನೂನೂ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಾಕೀತು ಮಾಡಿದರು.

ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಪ್ರದೇಶಗಳಿಗೆ ಬಸ್ ಸಂಚಾರ ಒದಗಿಸಬೇಕು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಅವಧಿಗೆ ತಕ್ಕಂತೆ ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಹಿರೇಕೆರೂರು ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ರಟ್ಟೀಹಳ್ಳಿ ತಹಶೀಲ್ದಾರ್ ಅರುಣಕುಮಾರ ಕಾರಗಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ., ಜಿ.ಪಂ ಮುಖ್ಯಲೆಕ್ಕಾಧಿಕಾರಿ ವಸಂತಕುಮಾರ, ತಾ.ಪಂ. ಆಡಳಿತಾಧಿಕಾರಿ ಎನ್.ಕೆ. ನಿರ್ಮಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀಕಾಂತ ಬೊಮ್ಮಣ್ಣನವರ, ಎಚ್.ವೈ.ಅಸಂಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT