ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸಬಲೀಕರಣ,ಜಾಗೃತಿಗೆ ಸೈಕಲ್ ಜಾಥಾ

ಮಹಿಳಾ ಸ್ವ ರಕ್ಷಣೆ ತರಬೇತಿಗೆ ‘ಸ್ವರ’ ಕಾರ್ಯಕ್ರಮ ಶೀಘ್ರ
Last Updated 6 ಡಿಸೆಂಬರ್ 2018, 15:46 IST
ಅಕ್ಷರ ಗಾತ್ರ

ಹಾವೇರಿ: ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಜಾಗೃತಿ ಮೂಡಿಸುವ ಸಲುವಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಕರ್ನಾಟಕ ಮಹಿಳಾ ಪೊಲೀಸ್‌ ಯಾತ್ರೆ (ಸೈಕ್ಲಿಂಗ್) ಹಮ್ಮಿಕೊಂಡಿದ್ದು, ಡಿ. 9ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಸಮಾಪನೆಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್‌ಪಿ)ಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಭಾಸ್ಕರ್‌ರಾವ್ ತಿಳಿಸಿದರು.

‘ಮಹಿಳಾ ಸಬಲೀಕರಣ, ಆರೋಗ್ಯ, ಕ್ರೀಡೆ, ಪರಿಸರ, ಸ್ವಚ್ಚ ಭಾರತ, ಬಯಲು ಶೌಚ ಮುಕ್ತ, ಪ್ರವಾಸೋದ್ಯಮ ಹಾಗೂ ಹೆಣ್ಣು ಮಗುವಿನ ರಕ್ಷಣೆಯ ಸಂದೇಶ ನೀಡುವ ಸಲುವಾಗಿ ಮೀಸಲು ಪಡೆಯ ಮಹಿಳಾ ಸಿಬ್ಬಂದಿ, ಮಹಿಳಾ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಈ ಜಾಥಾ ನಡೆಸಲಾಗುತ್ತಿದೆ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸೈಕಲ್‌ ಯಾತ್ರೆಯನ್ನು ಬೆಳಗಾವಿಯಲ್ಲಿ ಡಿ.5ರಿಂದ ಪ್ರಾರಂಭಿಸಿದ್ದು, ಹುಬ್ಬಳ್ಳಿ ಮೂಲಕ ಬಂದಿದ್ದೇವೆ. ಡಿ.7ಕ್ಕೆ ಚಿತ್ರದುರ್ಗ, ಡಿ. 8ಕ್ಕೆ ತುಮಕೂರಿನಲ್ಲಿ ವಾಸ್ತವ್ಯ ಮಾಡಲಿದ್ದೇವೆ. ಡಿ.9ರಂದು ಬೆಂಗಳೂರಿನಲ್ಲಿ ಜಾಥಾ ಸಮಾರೋಪಗೊಳ್ಳಲಿದ್ದು, ಅಲ್ಲಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುವರು ಎಂದರು.

ಮೀಸಲು ಪಡೆಯ ಮಹಿಳೆಯರು ರಾಷ್ಟ್ರೀಯ ಹೆದ್ದಾರಿಯಲ್ಲಿ 540 ಕಿ.ಮೀ. ದೂರ ಸೈಕ್ಲಿಂಗ್ ಮಾಡುತ್ತಿದ್ದಾರೆ. ದಾರಿಯುದ್ದಕ್ಕೂ ಅಂಗನವಾಡಿ, ಶಾಲಾ-ಕಾಲೇಜು, ಮಹಿಳಾ ಸಂಘಟನೆಗಳನ್ನು ಭೇಟಿ ಮಾಡಿ, ಸಂವಾದ ನಡೆಸುತ್ತಿದ್ದಾರೆ ಎಂದರು.

ಮಹಿಳಾ ಮೀಸಲು ಪಡೆಯ 45 ಸಿಬ್ಬಂದಿ, 11 ಮಹಿಳಾ ಪೊಲೀಸ್ ಅಧಿಕಾರಿಗಳು, ಇತರ 40 ಸಂಘಟನೆಯ ಪ್ರತಿನಿಧಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, ಪ್ರತಿದಿನ 100ರಿಂದ 110ಕಿ.ಮೀ ದೂರ ಕ್ರಮಿಸಲಾಗುತ್ತಿದೆ ಎಂದರು.

ಹಲವು ಐಎಎಸ್ ಅಧಿಕಾರಿಗಳು ಬೆಂಬಲ ಸೂಚಿಸಿ, ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಸೈಕಲ್ ರ‍್ಯಾಲಿಗೆ ಎಂಎಸ್ಐಎಲ್, ಕೆಎಂಎಫ್, ಭಾರತೀಯ ವೈದ್ಯಕೀಯ ಸಂಘಟನೆ, ಜನರಲ್ ತಿಮ್ಮಯ್ಯ ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಬೆಂಬಲಿಸಿವೆ ಎಂದು ತಿಳಿಸಿದರು.

ಸೈಕಲ್‌ ಜಾಗೃತಿ ಜಾಥಾದ ಬಳಿಕ, ಮಹಿಳಾ ಪೊಲೀಸ್‌ ಪಡೆಯು ಶಬರಿಮಲೆಗೆ ಮಹಿಳಾ ಬಂದೋಬಸ್ತ್‌ಗೆ ತೆರಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ. ಜಗದೀಶ, ಕೆ.ಎಸ್.ಆರ್.ಪಿ. ಶಿಗ್ಗಾವಿಯ ಕಮಾಂಡೆಂಟ್ ಪ್ರಸಾದ್ ಹಾಗೂ ಎಸಿಬಿ ಅಧಿಕಾರಿ ಶ್ರುತಿ, ಕಲ್ಬುರ್ಗಿ ಕೆ.ಎಸ್.ಆರ್.ಪಿ. ತರಬೇತಿ ಕೇಂದ್ರದ ಪ್ರಾಚಾರ್ಯ ಸವಿತಾ ಹೂಗಾರ, ಅಧಿಕಾರಿಗಳಾದ ನಂದಿನಿ, ಸೌಮ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT