ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌ಮಾನ್ ಕಾರ್ಡ್ ಸೌಲಭ್ಯ ನೀಡಿ

ಮಂಗನ ಕಾಯಿಲೆ ಕುರಿತು ಮುಂಜಾಗ್ರತೆ ವಹಿಸಿ-ಕುಷ್ಠರೋಗ ಪತ್ತೆಗೆ ಪ್ರೋತ್ಸಾಹಧನ
Last Updated 1 ಫೆಬ್ರುವರಿ 2019, 14:52 IST
ಅಕ್ಷರ ಗಾತ್ರ

ಹಾವೇರಿ:ಆಯುಷ್‌ ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲರಿಗೂ ಸ್ಮಾರ್ಟ್ ಕಾರ್ಡ್‌ ನೀಡುವ ಸಲುವಾಗಿ ಫೆ.6 ರಿಂದ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಂದಾಜು 18 ಲಕ್ಷ ಕಾರ್ಡ್‌ಗಳನ್ನು ವಿತರಿಸಬೇಕಾಗಿದ್ದು, ಈ ತನಕ 2,500 ವಿತರಣೆ ಮಾಡಲಾಗಿದೆ. ತ್ವರಿತವಾಗಿ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ದಿನಕ್ಕೆ ಕನಿಷ್ಠ 10 ಸಾವಿರ ಜನರ ನೋಂದಣಿ ಮಾಡಿ, ಕಾರ್ಡ್ ವಿತರಿಸಬೇಕು. ಜನತೆ ತಮ್ಮ ಪಡಿತರ ಕಾರ್ಡ್, ಆಧಾರ್ ಕಾರ್ಡ್, ಭಾವಚಿತ್ರದೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಂದಾಯಿಸಿಕೊಂಡು ಕಾರ್ಡ್‌ಗಳನ್ನು ಪಡೆಯಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ರೈತರು ಹೆಚ್ಚಿದ್ದು, ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಗಳನ್ನು ತ್ವರಿತವಾಗಿ ಜನರಿಗೆ ಒದಗಿಸಿಕೊಡಬೇಕು ಎಂದರು.

ಈ ಯೋಜನೆಯಡಿ ಪ್ರಾಥಮಿಕ, ಸಾಮಾನ್ಯ ದ್ವಿತೀಯ, ಸಂಕೀರ್ಣ ದ್ವಿತೀಯ, ತೃತೀಯ ಹಾಗೂ ತುರ್ತು ಹಂತದ ಚಿಕಿತ್ಸೆಗಳನ್ನು ಒದಗಿಸಲಾಗುವುದು. ಒಂದೊಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯವಿಲ್ಲದಿದ್ದರೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಕುಷ್ಠರೋಗ ನಿರ್ಮೂಲನಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಕುಷ್ಠರೋಗ ಪತ್ತೆ ಹಚ್ಚಿದ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗೆ ಪ್ರತಿ ಪ್ರಕರಣಕ್ಕೆ ₹100 ಪ್ರೋತ್ಸಾಹಧನ ನೀಡಲಾಗುವುದು ಎಂದರು.

ಕುಷ್ಠರೋಗ ನಿವಾರಣೆಗೆ ಶ್ರಮಿಸಿದ ಡಾ.ಪ್ರಶಾಂತ, ಮಲ್ಲೇಶಪ್ಪ ಹಾಗೂ ಆಶಾ ಕಾರ್ಯಕರ್ತೆ ರೂಪಾ ಅವರನ್ನು ಸನ್ಮಾನಿಸಿ ಪ್ರಮಾಣಪತ್ರ ನೀಡಲಾಯಿತು.

ಎಲ್ಲ ಆಸ್ಪತ್ರೆಗಳಲ್ಲಿ ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ಉದ್ಯಾನ ಅಭಿವೃದ್ಧಿ ಪಡಿಸಬೇಕು. ಹಸರೀಕರಣಗಳ ಮೂಲಕ ಉತ್ತಮ ವಾತಾವರಣ ರೂಪಿಸಬೇಕು. ಈ ಬಗ್ಗೆ ತೋಟಗಾರಿಕೆ ಉಪನಿರ್ದೇಶರಿಗೆ ಸೂಚಿಸಲಾಗಿದೆ ಎಂದರು.

ಶಿವಮೊಗ್ಗದಲ್ಲಿ ಮಂಗನಕಾಯಿಲೆ ಹರಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗದಲ್ಲಿ ಗರಿಷ್ಠ ಎಚ್ಚರವಹಿಸಬೇಕು ಎಂದರು. ಜಿಲ್ಲೆಯ 10 ಕಿ.ಮೀಯೊಳಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಉತ್ತರಿಸಿದರು.

ಕ್ಷಯರೋಗ, ಲಸಿಕಾ ಕಾರ್ಯಕ್ರಮ, ಮಲೇರಿಯಾ, ಪ್ರಸವ ಪೂರ್ವ ಭ್ರೂಣ ಪತ್ತೆ ಕಾರ್ಯಕ್ರಮಗಳ ಪ್ರಗತಿ ಕುರಿತು ಪರಿಶೀಲಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ಇತರ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT