ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವು: ‘ಜೀವವಿಮೆ’ ನೀಡಲು ಆಗ್ರಹ

Last Updated 17 ಆಗಸ್ಟ್ 2020, 18:09 IST
ಅಕ್ಷರ ಗಾತ್ರ

ಹಾವೇರಿ:ಕೊರೊನಾ ವಾರಿಯರ್ಸ್‍ಗೆ ಸಲ್ಲಬೇಕಾದ ‘ಜೀವವಿಮೆಯನ್ನು’ ಮೃತ ಅಂಗನವಾಡಿ ಕಾರ್ಯಕರ್ತೆ ಕುಟುಂಬಕ್ಕೆ ತಲುಪಿಸಬೇಕೆಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಆಗ್ರಹಿಸಿದರು.

ಕೋವಿಡ್-19 ಸೇವೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕೋವಿಡ್‌ನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಹಾವೇರಿ ತಾಲ್ಲೂಕಿನ ದಿಡಗೂರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಆ.14ರಂದು ಕೋವಿಡ್‌ ದೃಢಪಟ್ಟು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಅವರು ಮೃತಪಟ್ಟಿದ್ದಾರೆ. ಇದೀಗ ಅವರ ಕುಟುಂಬದ ಆಧಾರಸ್ಥಂಭವೇ ಕುಸಿದಂತಾಗಿದ್ದು, ಈ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಅಂಗನವಾಡಿ ಕಾರ್ಯಕರ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ದಾಖಲಾತಿ ವಿಭಾಗದವರು ‘ಅಂಗನವಾಡಿ ಕಾರ್ಯಕರ್ತೆ’ ಎಂದು ದಾಖಲಿಸುವ ಬದಲು ‘ಕೂಲಿ’ ಎಂದು ದಾಖಲಿಸುವ ಮೂಲಕ ಈ ಕಾರ್ಯಕರ್ತೆಗೆ ಅನ್ಯಾಯವೆಸಗಿದ್ದಾರೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹಾವನೂರ ಅವರ ಗಮನಕ್ಕೆ ದೂರವಾಣಿ ಮೂಲಕ ತಂದಾಗ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ದಾಖಲಾತಿ ಸಂದರ್ಭದಲ್ಲಿ ಆದ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಭಾನುವಾರ ಅಂಗನವಾಡಿ ಕಾರ್ಯಕರ್ತೆ ಮೃತಪಟ್ಟಿದ್ದರೂ, ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೂ ಅವರ ಮೃತದೇಹ ಸಾಗಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರ ಕುಟುಂಬಸ್ಥರು ದೂರಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರನ್ನು ‘ಕೊರೊನಾ ವಾರಿಯರ್ಸ್’ ಎಂದು ಪರಿಗಣಿಸಿದ್ದರೂ ಅವರಿಗೆ ಯಾವುದೇ ಸೌಲಭ್ಯಗಳನ್ನು ಇದುವರೆಗೂ ಕಲ್ಪಿಸಿಲ್ಲ. ಪಿ.ಪಿ.ಇ. ಕಿಟ್, ಕೈಗವಸು, ಮಾಸ್ಕ್, ಗೌನ್, ಸ್ಯಾನಿಟೈಸರ್ ಹೀಗೆ ಯಾವುದೇ ಸೌಲಭ್ಯವನ್ನೂ ಇದುವರೆಗೂ ಕಲ್ಪಿಸಿಲ್ಲ. ಕೂಡಲೇ ಈ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿ.ಡಿ. ಪೂಜಾರ, ಶಿವಲೀಲಾ ಪಾಟೀಲ, ಬೇಬಿ ನಡುವಿನಮಠ, ನಾಗರತ್ನಾ ರಾಣೆಬೆನ್ನೂರ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT