ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲೂ ದೆಹಲಿ ಮಾದರಿ ಚಳವಳಿ

ರೈತ ಹುತಾತ್ಮ ದಿನ ಆಚರಣೆ: ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಎಚ್ಚರಿಕೆ
Last Updated 10 ಜೂನ್ 2021, 17:27 IST
ಅಕ್ಷರ ಗಾತ್ರ

ಹಾವೇರಿ: ‘ಹಾವೇರಿಯಲ್ಲಿ ಗೋಲಿಬಾರ್‌ ಘಟನೆ ನಡೆದು 13 ವರ್ಷಗಳು ಕಳದಿವೆ. ಆ ಘಟನೆ ನೆನಪಿಸಿಕೊಂಡರೆ ಇಂದಿಗೂ ರಕ್ತ ಕುದಿಯುತ್ತದೆ. ನಮ್ಮ ಬೇಡಿಕೆಗಳನ್ನು 15 ದಿನದೊಳಗೆ ಈಡೇರಿಸದಿದ್ದರೆ ‘ದೆಹಲಿ ಮಾದರಿ ಚಳವಳಿ’ ನಡೆಸಬೇಕಾಗುತ್ತದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ‘14ನೇ ವರ್ಷದ ರೈತ ಹುತಾತ್ಮ ದಿನ’ದ ಅಂಗವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ರೈತರ ಬಲಿ:

ಸರ್ಕಾರ ರೈತರ ಬದುಕಿನ ಜತೆ ಚೆಲ್ಲಾಟವಾಡಿ, ರೈತರ ಎದೆಗೆ ಗುಂಡು ಹಾಕುವ ಕೆಲಸ ಮಾಡುತ್ತಿವೆ. ಗುಂಡೂರಾವ್‌ ಅವರ ಕಾಂಗ್ರೆಸ್‌ ಸರ್ಕಾರ ನವಲಗುಂದದಲ್ಲಿ ಮೂವರು ರೈತರನ್ನು ಬಲಿ ತೆಗೆದುಕೊಂಡಿತು. ದೇವೇಗೌಡರ ಜನತಾದಳ ಸರ್ಕಾರ ರೈತರನ್ನು ಬಲಿ ತೆಗೆದುಕೊಂಡಿತು. 2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಕೂಡ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಎಂಬ ಇಬ್ಬರು ರೈತರ ಸಾವಿಗೆ ಕಾರಣವಾಯಿತು. ಹೀಗೆ ಎಲ್ಲ ಸರ್ಕಾರಗಳು ರೈತ ಹಿತಾಸಕ್ತಿಯನ್ನು ಬಲಿಕೊಟ್ಟಿವೆ ಎಂದು ಕಿಡಿಕಾರಿದರು.

‌ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುತ್ತಿದ್ದರೂ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಅಕ್ರಮ ದಾಸ್ತಾನು ಮಾರಾಟ ಮತ್ತು ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರದ ತಪ್ಪು ನಿರ್ಧಾರ:

ತಜ್ಞರ ವರದಿಯನ್ನು ತಿರಸ್ಕರಿಸಿ, ಚುನಾವಣೆಗಳನ್ನು ನಡೆಸುವ ಮೂಲಕ ಕೊರೊನಾ ಸೋಂಕು ಹೆಚ್ಚಳವಾಗಲು ಸರ್ಕಾರ ಕಾರಣವಾಗಿದೆ. ಸರ್ಕಾರದ ತಪ್ಪು ನಿರ್ಧಾರದಿಂದ ಅನೇಕ ಬಡವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸರ್ಕಾರ ಕೂಡಲೇ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 50 ಹಾಸಿಗೆಗಳ ಆಸ್ಪತ್ರೆಯನ್ನು ಮಂಜೂರು ಮಾಡಬೇಕು, ಖಾಲಿ ಇರುವ ವೈದ್ಯಕೀಯ ಹುದ್ದೆಗಳನ್ನು ತುಂಬಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳು:

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು, 2015ರಿಂದ 2021ರವರೆಗೆ ಮುಂಗಾರು ಮತ್ತು ಹಿಂಗಾರು ಬೆಳೆ ವಿಮೆಯನ್ನು ಇಲ್ಲಿಯವರೆಗೂ ರೈತರಿಗೆ ಸರಿಯಾಗಿ ಪಾವತಿಸಿಲ್ಲ. ಕೂಡಲೇ ವಿಮೆ ಹಣ ಪಾವತಿಸಬೇಕು. ಆರು ತಿಂಗಳಿಂದ ಹಾಲು ಪೂರೈಕೆ ಮಾಡಿದ ರೈತರಿಗೆ ಸಹಾಯಧನ ಕೊಟ್ಟಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿದ್ದು, ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್‌ ಗಿರೀಶ ಸ್ವಾದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಮುಖಂಡರಾದ ಮರಿಗೌಡ ಪಾಟೀಲ, ಪ್ರಭುಗೌಡ ಪ್ಯಾಟಿ, ಬಸವನಗೌಡರ ಗಂಗಪ್ಪನವರ, ರುದ್ರಗೌಡ ಕಾಡನಗೌಡರ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೇಗೊಂಡರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT