ಸೋಮವಾರ, ಜುಲೈ 4, 2022
25 °C

ಹಾವೇರಿ | ಎಂಇಎಸ್ ಸಂಘಟನೆ ನಿಷೇಧಿಸಲು ಕಸಾಪ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕನ್ನಡ ಬಾವುಟ ಸುಟ್ಟು, ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪ‌ಗೊಳಿಸಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕಸಾಪ ಪದಾಧಿಕಾರಿಗಳು, ಆಜೀವ ಸದಸ್ಯರು, ಸಾಹಿತಿ-ಕಲಾವಿದರು ಗುರುವಾರ ಇಲ್ಲಿನ ಮೈಲಾರ ಮಹದೇವಪ್ಪನವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಎಲ್ಲ ದುಷ್ಕರ್ಮಿಗಳನ್ನು ಕೂಡಲೇ ರಾಜ್ಯ ಸರ್ಕಾರ ಬಂಧಿಸಬೇಕು. ಬೆಳಗಾವಿ ಕರ್ನಾಟಕ ರಾಜ್ಯದ ಸ್ವತ್ತಾಗಿದ್ದು, ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಪ್ರೀತಿಯಿಂದ ಅನ್ಯೂನ್ಯವಾಗಿ ಭಾವೈಕ್ಯದಿಂದ ಜೀವನವನ್ನು ನಡೆಸುತ್ತಿದ್ದಾರೆ. ಎಂ.ಇ.ಎಸ್ ಸಂಘಟನೆಯವರು ರಾಜ್ಯದ ಜನರ ಆಸ್ತಿ-ಪಾಸ್ತಿಯನ್ನು ಹಾಳು ಮಾಡುತ್ತಾ ಕನ್ನಡಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಾಡಿನಲ್ಲಿ ಗುಂಡಾ ವರ್ತನೆ ತೋರುತ್ತಿರುವ ಎಂ.ಇ.ಎಸ್ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬೇಕು. ಕನ್ನಡ ನಾಡು-ನುಡಿಯ ಬಗ್ಗೆ ಸದಾ ಒಂದಿಲ್ಲ ಎಂದು ಕ್ಯಾತೆ ತೆಗೆಯುತ್ತಾ ಬಂದಿರುವ ಎಂ.ಇ.ಎಸ್‍. ಪುಂಡಾಟಿಕೆಯನ್ನು ಸರ್ಕಾರ ಸಹಿಸಬಾರದು. ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.

ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿರುವುದು, ಕನ್ನಡ ಭಾವುಟವನ್ನು ಸುಟ್ಟುಹಾಕಿರುವ ಅತೀರೇಕದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಎಂ.ಇ.ಎಸ್‍ನವರು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವುದಲ್ಲದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. ನಾಡು-ನುಡಿಗೆ ಧಕ್ಕೆ ತರುವ ವಿಷಯವನ್ನು ರಾಜ್ಯ ಸರ್ಕಾರ ಗಂಭಿರವಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೈ.ಬಿ.ಆಲದಕಟ್ಟಿ, ರುದ್ರಪ್ಪ ಜಾಬಿನ, ಬಿ.ಎಂ.ಜಗಾಪುರ, ಕೆ.ಆರ್.ಕೋಣ್ತಿ, ರೇಣುಕಾ ಗುಡಿಮನಿ ಮತ್ತಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಎಸ್.ಎಸ್.ಬೇವಿನಮರದ, ಪ್ರಭು ಹಿಟ್ನಳ್ಳಿ, ವಿವೇಕಾನಂದ ಬೆಂಡಿಗೇರಿ, ವಿ.ಪಿ.ದ್ಯಾವಣ್ಣವರ, ನಜೀರ ಸವಣೂರ, ಎ.ಜಿ.ರಾಘವೇಂದ್ರ, ಎಸ್.ಎನ್.ಮುಗಳಿ, ಶಂಕ್ರಗೌಡ್ರು, ಪ್ರಬಾಕರ ಶಿಗ್ಲಿ, ಶಶಿಕಲಾ ಅಕ್ಕಿ, ಜಿ.ಜಿ.ಆರಾಧ್ಯಮಠ, ವಿರೇಶ ಶಂಕಿನಮಠ, ಜಗದೀಶ ಕನವಳ್ಳಿ, ಆರ್.ಬಿ.ದೊಡ್ಡಗೌಡ್ರ, ಸತೀಶ ಮಡಿವಾಳರ ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು