ಶಿಗ್ಗಾವಿ: ಮೊಬೈಲ್ ತಂತ್ರಾಂಶಗಳ ಕುರಿತ ಅಮಾನತು ಪ್ರಕರಣಗಳನ್ನು ರದ್ದು ಪಡಿಸಬೇಕು, ಕೇರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸಾದ್ ಅಕ್ಕಿ ಮಾತನಾಡಿ, ‘ಗ್ರಾಮ ಲೆಕ್ಕಾಧಿಕಾರಿಗಳು ನಿತ್ಯ ಸುಮಾರು 21 ವೆಬ್, ಮೊಬೈಲ್ ತಂತ್ರಾಂಶಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಸುಸಜ್ಜಿತ ಕಚೇರಿ ನೀಡಬೇಕು. ಪ್ರಿಂಟರ್, ಸ್ಕ್ಯಾನರ್, ಲ್ಯಾಪ್ ಟಾಪ್ ಮತ್ತು ಗುಣಮಟ್ಟದ ಮೊಬೈಲ್ ನೀಡಬೇಕು. ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಮೆಮೋ ಹಾಕಬಾರದು, ಖಾಲಿ ಇರುವ ಹುದ್ದೆಗಳಿಗೆ ಪದೋನ್ನತಿ ನೀಡಬೇಕು’ ಎಂದು ಆಗ್ರಹಿಸಿದರು.
‘ಅಂತರ್ ಪತಿ–ಪತ್ನಿ ಪ್ರಕರಣಗಳ ವರ್ಗಾವಣೆಗೆ ಅವಕಾಶ ನೀಡಬೇಕು. ಅಂಗವಿಕಲರಿಗೆ ಆದ್ಯತೆ ನೀಡಬೇಕು. ಬಡ್ತಿ ನೀಡಬೇಕು. ಕೆಲಸದ ಅವಧಿ ಮುಗಿದ ನಂತರ ನಡೆಯುವ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು. ₹ 3 ಸಾವಿರ ಆಪತ್ತಿನ ಭತ್ಯೆ ನೀಡಬೇಕು. ಮನೆ ಹಾನಿ ಪ್ರಕರಣದ ಜವಾಬ್ದಾರಿಯಿಂದ ಕೈಬಿಡಬೇಕು. ಜಾಬ್ ಚಾರ್ಟ್ ನೀಡಬೇಕು. ವಂಶವೃಕ್ಷ, ಜಾತಿ ಪ್ರಮಾಣ ಪತ್ರ, ತಪ್ಪು ಮಾಹಿತಿ ನೀಡುವ ಅರ್ಜಿದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಅನೇಕ ಗ್ರಾಮ ಲೆಕ್ಕಾಧಿಕಾರಿಗಳು ಜೀವ ಕಳೆದುಕೊಂಡಿದ್ದಾರೆ. ಜೀವ ಹಾನಿಯಾದ ಕುಟುಂಬಕ್ಕೆ ₹ 25 ಲಕ್ಷ ಪರಿಹಾರಧನ ನೀಡಬೇಕು. ಅಲ್ಲದೇ ಕೆಲಸದ ಒತ್ತಡ ತಡೆಯಬೇಕು’ ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷೆ ನಿರ್ಮಲಾ ಗಾಣಗಿ, ಪ್ರಧಾನ ಕಾರ್ಯದರ್ಶಿ ಸಲೀಂ ಪಾಪಣ್ಣವರ, ಖಜಾಂಚಿ ರಾಕೇಶ ಜಿ. ಸದಸ್ಯರಾದ ಸಂತೋಷ ಮಾಳವಾಡ, ಖಾಜಾಮೈನುದ್ದಿನ್ ಕಿಲ್ಲೆದಾರ್, ಬಿ.ಯು. ಸೊಂಟಕ್ಕಿ, ಸಾವಿತ್ರಿ ಬಡಿಗೇರ, ಮಂಜುಳಾ ಕಾಳೆ, ನಾಗರಾಜ ವಾಲಿಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.