ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ಅನುಷ್ಠಾನಕ್ಕೆ ಆಗ್ರಹ

ಬ್ರಾಹ್ಮಣ ಸಮಾವೇಶ: ಸಂಘಟಿತರಾಗಲು ಅಶೋಕ ಹಾರನಹಳ್ಳಿ ಸಲಹೆ
Last Updated 25 ಫೆಬ್ರುವರಿ 2023, 16:36 IST
ಅಕ್ಷರ ಗಾತ್ರ

ಹಾವೇರಿ: ‘ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ (ಇ.ಡಬ್ಲ್ಯೂ.ಎಸ್‌) ವ್ಯವಸ್ಥೆ ಜಾರಿಗೊಳಿಸಿದ್ದರೂ ಸಹ ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸುತ್ತಿಲ್ಲ, ಎರಡು ಮೂರು ವಾರಗಳಲ್ಲಿ ಇ.ಡಬ್ಲ್ಯೂ.ಎಸ್‌ ಪ್ರಮಾಣ ಪತ್ರ ಸೌಲಭ್ಯ ನೀಡದಿದ್ದರೆ ಈ ಕುರಿತು ಹೈಕೋರ್ಟ್‍ನಲ್ಲಿ ದಾವೆ ಹೂಡಲಾಗುವುದು’ ಎಂದು ಬ್ರಾಹ್ಮಣ ಸಮಾಜದ (ಎಕೆಬಿಎಂಎಸ್) ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

ತಾಲ್ಲೂಕಿನ ಅಗಡಿ ಗ್ರಾಮದ ಶ್ರೀಕ್ಷೇತ್ರ ಆನಂದವನದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ವತಿಯಿಂದ ಹಾವೇರಿ ಜಿಲ್ಲಾ ಪ್ರಥಮ ಬ್ರಾಹ್ಮಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇದ ಉಪನಿಷತ್ತುಗಳ ಬಗ್ಗೆ ತಿರಸ್ಕಾರ ಮನೋಭಾವ ಬೇಡ. ಬ್ರಾಹ್ಮಣರಿಂದಲೇ ಜಾತಿ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ ಎಂಬುದು ತಪ್ಪು ಅಭಿಪ್ರಾಯ. ನಮ್ಮಲ್ಲಿ ಒಗ್ಗಟ್ಟಿಲ್ಲ, ಅದನ್ನು ರಾಜಕೀಯ ಶಕ್ತಿಗಳು ದುರುಪಯೋಗ ಪಡೆಸಿಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ ಹಾಗೂ ಶೃಂಗೇರಿಯಲ್ಲಿ ಶುಕ್ಲ ಯಜುರ್ವೇದ ಸಮ್ಮೇಳನ ಆಯೋಜಿಸಲಾಗುವುದು. ಹಾವೇರಿ ಭಾಗದ ಬ್ರಾಹ್ಮಣರು ಕ್ರಿಯಾಶೀಲರಾಗಿ ಸಂಘಟಿತರಾಗಿ ಗಾಯತ್ರಿ ಭವನ ನಿರ್ಮಿಸಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ. ಪುತ್ತುರಾಯ, ರಾಜ್ಯದಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದರೂ ಅಲ್ಪಸಂಖ್ಯಾತರಿಗೆ ಸಿಗುವ ಸ್ಥಾನಮಾನ ನಮಗೆ ಸಿಗುತ್ತಿಲ್ಲ, ಬ್ರಾಹ್ಮಣರ ಸಂಸ್ಕಾರ ಇಡೀ ಸಮಾಜದ ಮೇಲೆ ಪ್ರಭಾವ ಬೀರಬೇಕು. ಸಂಸ್ಕಾರ ನೀಡುವಲ್ಲಿ ಮಾತೆಯರ ಪಾತ್ರ ದೊಡ್ಡದು. ಸ್ವಾಭಿಮಾನ, ಸಂಸ್ಕಾರದ ಕೊರತೆ ಆಗಬಾರದು. ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಸಮಾಜದ ದೊಡ್ಡ ಆಸ್ತಿ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಘವೇಂದ್ರ ಭಟ್ ಮಾತನಾಡಿದರು. ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತ ಮೊಕ್ತಾಲಿ ಅಧ್ಯಕ್ಷತೆ ವಹಿಸಿದ್ದರು. ಅಗಡಿ ಆನಂದವನದ ಶ್ರೀ ಗುರುದತ್ತ ಚಕ್ರವರ್ತಿ ಸಾನ್ನಿಧ್ಯ ವಹಿಸಿದ್ದರು. ವಿಜಯ ನಾಡಜೋಶಿ, ಪ್ರಮೋದ ಮುನವಳ್ಳಿ, ಲಲಿತಾ ದೇಶಪಾಂಡೆ, ಜಿ.ಎಲ್. ನಾಡಗೇರ, ಉಮೇಶ ವಿಶ್ವರೂಪ, ಪಾರ್ವತಿಬಾಯಿ ಕಾಶಿಕರ ಇದ್ದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ ಸ್ವಾಗತಿಸಿದರು. ಪ್ರಭಾಕರರಾವ್ ಮಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಾತ್ರೇಯ ಕಳ್ಳಿಹಾಳ ನಿರೂಪಿಸಿದರು. ಸುರೇಶ ಕಡಕೋಳ ವಂದಿಸಿದರು. ಹನುಮಂತನಾಯಕ ಬದಾಮಿ ನಿರ್ಣಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT