ಗುರುವಾರ , ಏಪ್ರಿಲ್ 15, 2021
19 °C
ರಾಷ್ಟ್ರೀಯ ಮತದಾನ ದಿನಾಚರಣೆ: ನ್ಯಾಯಾಧೀಶರಾದ ರೇಣುಕಾದೇವಿ ಅಭಿಮತ

‘ಮತದಾನದಿಂದ ಪ್ರಜಾಪ್ರಭುತ್ವ ಸುಭದ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಹಸಿದವರಿಗೆ ಅನ್ನದಾನ, ರೋಗಿಗಳಿಗೆ ರಕ್ತದಾನ ಮಾಡುವುದು ಎಷ್ಟು ಶ್ರೇಷ್ಠವೋ ಅದೇ ರೀತಿ ಮತದಾನ ಮಾಡುವುದು ಕೂಡ ಅಷ್ಟೇ ಶ್ರೇಷ್ಠ ಕೆಲಸವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗೆ 18 ವರ್ಷ ತುಂಬಿದ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್.ಎಚ್.ರೇಣುಕಾದೇವಿ ಹೇಳಿದರು.

ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಒಂದೊಂದು ಮತವು ಅತ್ಯಮೂಲ್ಯವಾದದ್ದು. ಒಂದು ಮತದಿಂದ ವಿಜೇತರಾಗಿದ್ದಾರೆ ಹಾಗೂ ಒಂದು ಮತದ ಅಂತರದಿಂದ ಪರಾಭವಗೊಂಡಿರುವ ಉದಾಹರಣೆಗಳಿವೆ. ಸಂವಿಧಾನದತ್ತವಾಗಿ ದೊರೆತಿರುವ ಮತದಾನದ ಹಕ್ಕನ್ನು ಅರಿತುಕೊಂಡು ಗುರುತರ ಜವಾಬ್ದಾರಿಯಿಂದ ಒಳ್ಳೆಯ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು. ಯಾವುದೇ ಅಭ್ಯರ್ಥಿಗಳು ಮತದಾನಕ್ಕೆ ಯೋಗ್ಯವಿಲ್ಲವಾದಲ್ಲಿ ‘ನೋಟಾ’ಕ್ಕೆ ಮತದಾನ ಮಾಡಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ‘1950ರಲ್ಲಿ ಭಾರತ ಚುನಾವಣಾ ಆಯೋಗ ಸ್ಥಾಪನೆಯಾಯಿತು. ಆ ದಿನವನ್ನು 2011ರಿಂದ ರಾಷ್ಟ್ರೀಯ ಮತದಾರರ ದಿನ ಎಂದು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಬಲವಾಗಿ ಬೇರೂರಲು ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಮಹತ್ವದ ಪಾತ್ರವಹಿಸುತ್ತದೆ’ ಎಂದು ಹೇಳಿದರು.

ವಾಟ್ಸ್‌ಆ್ಯಪ್ ಬಳಕೆಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಸುಳ್ಳು, ದಾರಿತಪ್ಪಿಸುವ ಸಂದೇಶಗಳ ಬಗ್ಗೆ ಎಚ್ಚರವಿಬೇಕು. ಯಾವುದೇ ವಿಷಯವಿರಲಿ ಅದನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು. ಜ್ಞಾನವೃದ್ಧಿಗೆ ಸಾಮಾಜಿಕ ಜಾಲತಾಣದ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋವಿಡ್ ವೈರಾಣು ತಡೆಗೆ ಎಲ್ಲರೂ ಮಾಸ್ಕ್‌ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ವ್ಯಾಕ್ಸಿನ್ ಪಡೆದುಕೊಂಡವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಆರ್.ಗುಡಿ ಅವರು ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರೀಯ ಮತದಾರರ ದಿನಾಚರಣೆ ನೋಡಲ್ ಅಧಿಕಾರಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ವಿತರಣೆ, ಹೊಸ ನೋಂದಾಯಿತ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಣೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಎಸ್.ಆರ್, ಚುನಾವಣಾ ತಹಶೀಲ್ದಾರ್ ಡಾ.ಪ್ರಶಾಂತ ನಾಲವಾರ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು