ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಡೆಂಗಿ ಹಾವಳಿ: ಕಾರಿಡಾರ್‌ನಲ್ಲಿ ಬೆಡ್‌

ಹಾವೇರಿ ಜಿಲ್ಲಾಸ್ಪತ್ರೆ ವಾರ್ಡ್‌ಗಳು ಭರ್ತಿ; ಜಾಗದ ಕೊರತೆ
Published 9 ಜುಲೈ 2024, 1:12 IST
Last Updated 9 ಜುಲೈ 2024, 1:12 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿಯ ಜಿಲ್ಲಾಸ್ಪತ್ರೆ ರೋಗಿಗಳಿಂದ ಭರ್ತಿ ಆಗಿದೆ. ವಾರ್ಡ್‌ಗಳಲ್ಲಿ ಜಾಗದ ಕೊರತೆ ಉಂಟಾಗಿದ್ದು, ಹೊರಭಾಗದ ಕಾರಿಡಾರ್‌ಗಳಲ್ಲಿ (ಪಡಸಾಲೆ) ಬೆಡ್‌ಗಳನ್ನು ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೂ 481 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 350ಕ್ಕೂ ಹೆಚ್ಚು ರೋಗಿಗಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಇರುವುದರಿಂದ, ರೋಗಿಗಳು ಬಹುಬೇಗನೇ ಗುಣಮುಖರಾಗುತ್ತಿದ್ದಾರೆ. ಹೀಗಾಗಿ, ಜಿಲ್ಲಾಸ್ಪತ್ರೆಗೆ ಬರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಡೆಂಗಿ, ಇಲಿ ಜ್ವರ ಹಾಗೂ ಇತರೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯಲ್ಲಿರುವ ತೀವ್ರ ನಿಗಾ ಘಟಕದ ವಾರ್ಡ್‌ನಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ. ವಾರ್ಡ್‌ನಲ್ಲಿರುವ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದು, ಹೊರಗಿನ ಕಾರಿಡಾರ್‌ನಲ್ಲಿ ಪ್ರತ್ಯೇಕ ಬೆಡ್‌ಗಳನ್ನು ಹಾಕಿ ರೋಗಿಗಳನ್ನು ಇರಿಸಲಾಗಿದೆ.

ತುರ್ತು ಸ್ಥಿತಿಯಲ್ಲಿ ಹೊಸ ರೋಗಿಗಳು ಬಂದಾಗಲೂ ಕಾರಿಡಾರ್‌ನಲ್ಲಿಯೇ ಬೆಡ್ ಇಟ್ಟು ದಾಖಲಿಸಿಕೊಳ್ಳಲಾಗುತ್ತಿದೆ. 330 ಬೆಡ್ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸದ್ಯ 380ಕ್ಕೂ ಹೆಚ್ಚು ರೋಗಿಗಳಿದ್ದು, ಹೆಚ್ಚುವರಿಯಾದ ಹಲವು ರೋಗಿಗಳು ಕಾರಿಡಾರ್‌ನ ಬೆಡ್‌ ಮೇಲೆ ಮಲಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

‘ಮಳೆಗಾಲ ಶುರುವಾದಾಗಿನಿಂದ ಡೆಂಗಿ ಹಾಗೂ ಇತರೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಗಂಭೀರ ಸಮಸ್ಯೆ ಇರುವ ಬಡವರು ಆಸ್ಪತ್ರೆಗೆ  ಬಂದಾಗ ಬೆಡ್ ಭರ್ತಿ ನೆಪದಲ್ಲಿ ಅವರನ್ನು ವಾಪಸ್ಸು ಕಳುಹಿಸಲಾಗುವುದಿಲ್ಲ. ವಾರ್ಡ್‌ ಸಾಲದಿದ್ದರೂ ಕಾರಿಡಾರ್‌ನಲ್ಲಿ ಬೆಡ್ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

ಜಾಗ ಖಾಲಿ ಇದ್ದರೂ ಬಳಕೆಗೆ ಹಿಂದೇಟು:

ತೀವ್ರ ನಿಗಾ ಘಟಕದ ವಾರ್ಡ್‌ ಎದುರು ಆಯುಷ್ ಹಾಗೂ ದಂತ ವಿಭಾಗದ ವಾರ್ಡ್‌ಗಳಿವೆ. ಸದ್ಯ ಅಲ್ಲಿ ಒಬ್ಬ ರೋಗಿಯೂ ಇಲ್ಲ. ಈ ಎರಡೂ ವಾರ್ಡ್‌ಗಳನ್ನು ಡೆಂಗಿ ಹಾಗೂ ಜ್ವರದ ರೋಗಿಗಳಿಗೆ ಚಿಕಿತ್ಸೆಗಾಗಿ ಬಳಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ‘ಆಯುಷ್ ಹಾಗೂ ದಂತ ವಿಭಾಗದ ಖಾಲಿ ವಾರ್ಡ್‌ಗಳನ್ನು ಡೆಂಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿ’ ಎಂದು ಸೂಚನೆ ನೀಡಿದ್ದರು. ಅಷ್ಟಾದರೂ ವಾರ್ಡ್‌ಗಳು ಬಳಕೆಯಾಗುತ್ತಿಲ್ಲ. ಇದರಿಂದಾಗಿ ಕಾರಿಡಾರ್‌ನಲ್ಲಿ ರೋಗಿಗಳಿಗೆ ಬೆಡ್ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ‘ದಂತ ವಿಭಾಗದಲ್ಲಿ ಶಿಬಿರ ನಡೆಯುತ್ತಿದ್ದು, ಅವರಿಗೆ ಜಾಗ ಬೇಕು. ಆಯುಷ್ ವಿಭಾಗದಲ್ಲಿರುವ ಜಾಗವನ್ನು ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅದಕ್ಕೂ ಮುನ್ನ ಆಯುಷ್ ವಿಭಾಗದವರಿಗೆ ಬೇರೆ ಕಟ್ಟಡ ಹುಡುಕಬೇಕಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದರು.

ಇದೇ ಜಿಲ್ಲಾಸ್ಪತ್ರೆಯ ಕಟ್ಟಡದ ಚಾವಣಿ ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಸೋರುತ್ತಿತ್ತು. ಇದೇ ವಿಚಾರದಲ್ಲಿ ಎಂಜಿನಿಯರ್ ಅಮಾನತಾಗಿತ್ತು. ಚಾವಣಿ ದುರಸ್ತಿ ಹಾಗೂ ಮತ್ತೊಂದು ಮಹಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಅದು ಸಹ ನಿಧಾನಗತಿಯಲ್ಲಿದೆ.

ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ವಾರ್ಡ್‌ಗಳು ಭರ್ತಿಯಾಗಿವೆ. ಕಾಲಿಡಲು ಜಾಗವಿಲ್ಲದಂತಾಗಿದೆ. ಕಾರಿಡಾರ್‌ನ ಬೆಡ್‌ನಲ್ಲಿ ನನ್ನ ಮಗನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ
ರಾಮಪ್ಪ, ಚಿಕಿತ್ಸೆ ಪಡೆಯುತ್ತಿರುವ ಬಾಲಕನ ತಂದೆ
ತುರ್ತು ಅಗತ್ಯವಿರುವವರಿಗೆ ಬೆಡ್‌ ಇಲ್ಲವೆಂದು ನಿರಾಕರಿಸುವುದಿಲ್ಲ. ಜಾಗದ ಕೊರತೆ ಇದ್ದರೂ ಕಾರಿಡಾರ್‌ನಲ್ಲಿ ಬೆಡ್ ಇರಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ
ಡಾ. ಪಿ.ಆರ್. ಹಾವನೂರ ಹಾವೇರಿ ಜಿಲ್ಲಾ ಶಸ್ತ್ರ ಚಿಕಿತ್ಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT